ನಿದ್ದೆ ಆರೋಗ್ಯಕ್ಕೆ ಒಳ್ಳೆಯದು. ಕೆಲವರಿಗೆ ಅಗತ್ಯಕ್ಕಿಂತಲೂ ಹೆಚ್ಚು ನಿದ್ದೆ ಮಾಡುವ ಅಭ್ಯಾಸವಿದೆ. ರಾತ್ರಿ 9 ಗಂಟೆಗಳಿಗಿಂತ್ಲೂ ಹೆಚ್ಚು ಹೊತ್ತು ನಿದ್ದೆ ಮಾಡೋದು, ಮಧ್ಯಾಹ್ನದ ಹೊತ್ತಲ್ಲೂ ನಿದ್ದೆ ಮಾಡೋ ಅಭ್ಯಾಸ ನಿಮಗಿದ್ರೆ ಅದನ್ನು ಬಿಟ್ಟುಬಿಡಿ. ಯಾಕಂದ್ರೆ ಈ ರೀತಿ ಅತಿಯಾದ ನಿದ್ದೆಯಿಂದ ನೀವು ಪಾರ್ಶ್ವವಾಯುವಿಗೆ ತುತ್ತಾಗುವ ಸಾಧ್ಯತೆ ಇರುತ್ತದೆ.
ರಾತ್ರಿಯಲ್ಲಿ ಚೆನ್ನಾಗಿ ನಿದ್ದೆ ಮಾಡಿದ್ದರೂ, ಮಧ್ಯಾಹ್ನ ಸುಮಾರು 90 ನಿಮಿಷ ಮಲಗುವ ಅಭ್ಯಾಸ ಇರುವವರು ಪಾರ್ಶ್ವವಾಯುವಿಗೆ ಒಳಗಾಗುವ ಸಾಧ್ಯತೆ ಶೇ.25ರಷ್ಟು ಹೆಚ್ಚಾಗಿರುತ್ತದೆ ಅಂತಾ ಸಂಶೋಧಕರು ತಿಳಿಸಿದ್ದಾರೆ.
ನಿಮ್ಮ ಮೆದುಳಿಗೆ ರಕ್ತವನ್ನು ಪೂರೈಸುವ ರಕ್ತನಾಳದಲ್ಲಿ ರಕ್ತಸ್ರಾವ ಅಥವಾ ತಡೆ ಉಂಟಾದಾಗ ಪಾರ್ಶ್ವವಾಯುವಿಗೆ ತುತ್ತಾಗುತ್ತಾರೆ. ಇದು ಸರಿಯಾದ ಪ್ರಮಾಣದ ಆಮ್ಲಜನಕ ಮತ್ತು ಪೋಷಕಾಂಶಗಳ ಹರಿವನ್ನು ಮೆದುಳಿಗೆ ತಲುಪದಂತೆ ತಡೆಯುತ್ತದೆ. ಆಮ್ಲಜನಕದ ಕೊರತೆಯಿಂದ ಮೆದುಳಿನ ಕೋಶಗಳು ಮತ್ತು ಅಂಗಾಂಶಗಳಿಗೆ ಹಾನಿಯಾಗುತ್ತದೆ.
ಅಂತಿಮವಾಗಿ ಮೆದುಳಿನ ಕೋಶಗಳ ಸಾವಿಗೆ ಕಾರಣವಾಗುತ್ತದೆ. ಪಾರ್ಶ್ವವಾಯು, ಮಂದವಾದ ಮಾತು, ತಲೆತಿರುಗುವಿಕೆ, ದೃಷ್ಟಿದೋಷ ಹೀಗೆ ಹಲವು ಬಗೆಯ ತೊಂದರೆಗಳು ಕಾಣಿಸಿಕೊಳ್ಳುತ್ತವೆ. ಈ ರೀತಿ ಸ್ಟ್ರೋಕ್ ಬರದಂತೆ ತಡೆಯಲು ಸರಿಯಾದ ಕ್ರಮದಲ್ಲಿ ನಿದ್ದೆ ಮಾಡುವುದನ್ನು ಅಭ್ಯಾಸ ಮಾಡಿಕೊಳ್ಳಿ. ಅದರ ಜೊತೆಗೆ ವ್ಯಾಯಾಮ ತಪ್ಪದೇ ಮಾಡಿ. ತಂಬಾಕು ಸೇವನೆಯನ್ನು ನಿಲ್ಲಿಸುವುದು ಉತ್ತಮ.