ಮೈಸೂರು : ಅಣ್ಣ- ತಂಗಿಯ ಹೃದಯಾನುಬಂಧ ವರ್ಣಿಸಲಾರದ್ದು, ಇದಕ್ಕೆ ಬೆಲೆಯೇ ಕಟ್ಟಲಾಗದು ಎಂಬ ಮಾತು ಹಾಗೂ ಇದಕ್ಕೆ ಪುಷ್ಟಿ ನೀಡುವ ಘಟನೆಗಳು ಆಗಾಗ ನಡೆಯುತ್ತಲೇ ಇರುತ್ತವೆ. ಸಹೋದರ – ಸಹೋದರಿಯರ ಪ್ರೀತಿಯ ಬಂಧವೂ ಹಾಗೆಯೇ ಇರುತ್ತದೆ. ಇಲ್ಲೊಂದು ಘಟನೆ ನಡೆದಿದ್ದು, ಅಣ್ಣ ಹಾಗೂ ಸಹೋದರಿ ಸಾವಿನಲ್ಲಿಯೂ ಒಂದಾಗಿದ್ದಾರೆ.
ಜಿಲ್ಲೆಯ ಹುಣಸೂರಿನಲ್ಲಿ ಈ ಘಟನೆ ಬೆಳಕಿಗೆ ಬಂದಿದ್ದು, ಅಣ್ಣನ ಮೃತದೇಹ ನೋಡುತ್ತಿದ್ದಂತೆ ಸಹೋದರಿಯೂ ಹೃದಯಾಘಾತಕ್ಕೆ ಒಳಗಾಗಿ ಇಹಲೋಕ ತ್ಯಜಿಸಿದ್ದಾರೆ. ಕಾರು ಹಾಗೂ ಬೈಕ್ ಮಧ್ಯೆ ನಡೆದ ಅಪಘಾತದಲ್ಲಿ ಸಹೋದರ ಕೀರ್ತಿ(28) ಸಾವನ್ನಪ್ಪಿದ್ದ. ಕೀರ್ತಿ ಸಾವನ್ನಪ್ಪಿದ ಸುದ್ದಿ ತಿಳಿಯುತ್ತಿದ್ದಂತೆ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. ಅಣ್ಣ ಕೀರ್ತಿಯನ್ನು ಆತನ ದೊಡ್ಡಪ್ಪನ ಮಗಳು ರಶ್ಮಿ(21) ಹೆಚ್ಚಾಗಿ ಹಚ್ಚಿಕೊಂಡಿದ್ದಳು. ಆತನ ಸಾವಿನ ಸುದ್ದಿ ಕೇಳುತ್ತಿದ್ದಂತೆ ತುಂಬಾ ಆಘಾತಗೊಂಡಿದ್ದಳು. ಕೀರ್ತಿಯ ಅಂತ್ಯ ಸಂಸ್ಕಾರ ನಡೆಯುತ್ತಿದ್ದ ವೇಳೆ ರಶ್ಮಿ ಹೃದಯಾಘಾತಕ್ಕೆ ಒಳಗಾಗಿ ಇಹಲೋಕ ತ್ಯಜಿಸಿದ್ದಾರೆ.
ತಾಲೂಕಿನ ಸೋಮನಹಳ್ಳಿ ಗೇಟ್ ಹತ್ತಿರ ನಡೆದಿದ್ದ ಅಪಘಾತದಲ್ಲಿ ಕೀರ್ತಿ ಸಾವನ್ನಪ್ಪಿದ್ದ. ಈ ಘಟನೆಯಲ್ಲಿ ಮತ್ತೆ ಮೂವರು ಗಂಭೀರವಾಗಿ ಗಾಯಗೊಂಡಿದ್ದರು. ಕೀರ್ತಿ ಅಂತ್ಯ ಸಂಸ್ಕಾರ ಇಂದು ನಡೆದಿತ್ತು. ಅಲ್ಲಿ ರಶ್ಮಿ ಕೂಡ ಭಾಗವಹಿಸಿದ್ದರು. ಆತನ ಪಾರ್ಥಿವ ಶರೀರ ನೋಡುತ್ತಿದ್ದಂತೆ ರಶ್ಮಿ ಸ್ಥಳದಲ್ಲಿಯೇ ಕುಸಿದು ಬಿದ್ದಿದ್ದಾಳೆ. ಕೂಡಲೇ ಹೆಚ್ಚಿನ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಿತ್ತಾದರೂ ಚಿಕಿತ್ಸೆ ಫಲಕಾರಿಯಾಗದೆ ರಶ್ಮಿ ಸಾವನ್ನಪ್ಪಿದ್ದಾಳೆ. ಒಂದು ಜೀವದೊಂದಿಗೆ ಕುಟುಂಬದ ಮತ್ತೊಂದು ಜೀವ ಹೋಗಿದ್ದಕ್ಕೆ ಕುಟುಂಬಸ್ಥರ ಗೋಳಾಟ ಹೇಳತೀರದಾಗಿದೆ. ಈ ಕುರಿತು ಹುಣಸೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.