ಶುಕ್ರವಾರದಂದು ನಡೆದ ರಾಜ್ಯಸಭಾ ಚುನಾವಣೆಯಲ್ಲಿ ಜೆಡಿಎಸ್ ನ ಕೋಲಾರ ಕ್ಷೇತ್ರದ ಶಾಸಕರಾದ ಶ್ರೀನಿವಾಸ ಗೌಡ ಹಾಗೂ ಗುಬ್ಬಿ ಕ್ಷೇತ್ರದ ಶಾಸಕ ಎಸ್.ಆರ್. ಶ್ರೀನಿವಾಸ್ ಅಡ್ಡ ಮತದಾನ ಮಾಡಿದ್ದಾರೆ ಎಂದು ಹೇಳಲಾಗಿತ್ತು. ಅದರಲ್ಲೂ ಕೋಲಾರ ಕ್ಷೇತ್ರದ ಶಾಸಕ ಶ್ರೀನಿವಾಸ್ ಗೌಡ, ಮಾಧ್ಯಮಗಳ ಮುಂದೆ ಬಹಿರಂಗವಾಗಿಯೇ ತಾವು ಕಾಂಗ್ರೆಸ್ ಅಭ್ಯರ್ಥಿಗೆ ಮತ ಚಲಾಯಿಸಿರುವುದಾಗಿ ಹೇಳಿಕೊಂಡಿದ್ದರು.
ಇನ್ನು ಗುಬ್ಬಿ ಕ್ಷೇತ್ರದ ಶಾಸಕರಾದ ಶ್ರೀನಿವಾಸ್, ಅಡ್ಡ ಮತದಾನ ಮಾಡಿದ ಕುರಿತು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ. ಕುಮಾರಸ್ವಾಮಿ ನೀಡಿದ ಹೇಳಿಕೆಗೆ ಖಾರವಾಗಿಯೇ ಪ್ರತಿಕ್ರಿಯಿಸಿ ಏಕವಚನದಲ್ಲಿ ವಾಗ್ದಾಳಿ ನಡೆಸಿದ್ದರು. ನಾನು ಮತದಾನ ಮಾಡುವಾಗ ಅವನೇನು ಕತ್ತೆ ಕಾಯುತ್ತಿದ್ದನಾ ಎಂದು ಪ್ರಶ್ನಿಸಿದ್ದರು.
ಇದೀಗ ಈ ಇಬ್ಬರು ಶಾಸಕರ ವಿರುದ್ಧ ಕ್ರಮ ಕೈಗೊಳ್ಳಲು ಮುಂದಾಗಿರುವ ಜೆಡಿಎಸ್ ನಾಯಕರು ಪಕ್ಷದಿಂದ ಉಚ್ಚಾಟಿಸಲು ತೀರ್ಮಾನಿಸಿದ್ದಾರೆ. ಅಲ್ಲದೆ ಈ ಇಬ್ಬರನ್ನು ಶಾಸಕ ಸ್ಥಾನದಿಂದ ಅನರ್ಹಗೊಳಿಸುವಂತೆ ವಿಧಾನಸಭೆ ಸಭಾಪತಿಗಳಿಗೆ ಮನವಿ ಸಲ್ಲಿಸುವುದರ ಜೊತೆಗೆ ನ್ಯಾಯಾಲಯದ ಮೊರೆ ಹೋಗಲು ನಿರ್ಧರಿಸಲಾಗಿದೆ.