ಚೀನಾದ ಮಹಾನಗರದಲ್ಲಿ ಮೊದಲು ಆರಂಭವಾದ ಕೊರೊನಾ ಮಹಾಮಾರಿ ಭಾರತಕ್ಕೂ ವ್ಯಾಪಿಸಿ ಸಾಕಷ್ಟು ಅನಾಹುತ ಮಾಡಿದೆ. ಮೊದಲ ಹಾಗೂ ಎರಡನೇ ಅಲೆಯಿಂದ ಲಕ್ಷಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದು, ಈಗ ಮೂರನೇ ಅಲೆ ಭೀತಿ ಎದುರಾಗಿದೆ.
ಇದರ ಮಧ್ಯೆ 100 ಕೋಟಿಗೂ ಅಧಿಕ ದೇಶವಾಸಿಗಳಿಗೆ ಕೊರೊನಾ ಲಸಿಕೆ ನೀಡಲಾಗಿದ್ದು, ಇದರಿಂದ ಸೋಂಕಿನ ತೀವ್ರತೆ ಕಡಿಮೆಯಾಗಿದೆ. ಆದರೆ ಕೆಲವರು ಅಡ್ಡ ಪರಿಣಾಮಗಳಿಗೆ ಹೆದರಿ ಇದುವರೆಗೂ ಕೊರೊನಾ ಲಸಿಕೆ ಪಡೆದಿಲ್ಲ. ಕರ್ನಾಟಕದಲ್ಲಿ ಮೊದಲ ಲಸಿಕೆ ಪಡೆದ ಸುಮಾರು 43 ಲಕ್ಷ ಮಂದಿ ಅವಧಿ ಮುಗಿದರೂ ಸಹ ಎರಡನೇ ಡೋಸ್ ಪಡೆಯಲು ಮೀನಾಮೇಷ ಎಣಿಸುತ್ತಿದ್ದಾರೆ ಎನ್ನಲಾಗಿದೆ.
ಈಗ ಕೊರೊನಾದ ಹೊಸ ರೂಪಾಂತರಿ ತಳಿ ಓಮಿಕ್ರಾನ್ ಆಫ್ರಿಕಾ ದೇಶಗಳಲ್ಲಿ ಪತ್ತೆಯಾಗಿದ್ದು ಭಾರತಕ್ಕೂ ಹರಡುವ ಭೀತಿ ವ್ಯಕ್ತವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಲಸಿಕಾ ಅಭಿಯಾನಕ್ಕೆ ಚುರುಕು ನೀಡಲು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಮುಂದಾಗಿವೆ. ಇದರ ಮಧ್ಯೆಯೂ ಹಲವರು ಲಸಿಕೆ ಹಾಕಿಸಿಕೊಳ್ಳಲು ಹಿಂದೇಟು ಹಾಕುತ್ತಿದ್ದಾರೆ.
ಇಂತಹುದೇ ಒಂದು ಪ್ರಕರಣದಲ್ಲಿ ಅಡ್ಡಪರಿಣಾಮಗಳಿಗೆ ಹೆದರಿ ಹುಬ್ಬಳ್ಳಿಯ ಯಲ್ಲಾಪುರ ಓಣಿಯ ಆನಂದ ಕೊಣ್ಣೂರಕರ ಎಂಬಾತ ಲಸಿಕೆ ಹಾಕಿಸಿಕೊಂಡರೆ ಆರೋಗ್ಯದಲ್ಲಿ ವ್ಯತ್ಯಯವಾದರೆ ಗತಿಯೇನು ಎಂದು ಅಧಿಕಾರಿಗಳನ್ನು ಪ್ರಶ್ನಿಸಿದ್ದಾರೆ. ಅಧಿಕಾರಿಗಳು ಎಷ್ಟೇ ಭರವಸೆ ನೀಡಿದರು ಆನಂದ ಅವರಿಗೆ ಮನವರಿಕೆಯಾಗಿಲ್ಲ. ಅಂತಿಮವಾಗಿ ಮಹಾನಗರಪಾಲಿಕೆ ಆಯುಕ್ತ ಡಾ ಸುರೇಶ್ ಹಿಟ್ನಾಳ, ಲಸಿಕೆ ಪಡೆಯುವುದರಿಂದ ಯಾವುದೇ ಅಡ್ಡ ಪರಿಣಾಮವಾಗುವುದಿಲ್ಲ. ಒಂದು ವೇಳೆ ಏನಾದರೂ ಸಂಭವಿಸಿದರೆ ಜಿಲ್ಲಾಡಳಿತ ಹಾಗೂ ಮಹಾ ನಗರ ಪಾಲಿಕೆ ಅದರ ಜವಾಬ್ದಾರಿ ಹೊರುತ್ತದೆ ಎಂದು ಪತ್ರ ಬರೆದುಕೊಟ್ಟಿದ್ದಾರೆ.
ಈ ಗ್ಯಾರಂಟಿ ಪತ್ರಕ್ಕೆ ಜಿಲ್ಲಾಧಿಕಾರಿ ನಿತೇಶ್ ಪಾಟೀಲ, ಆಯುಕ್ತ ಡಾ. ಸುರೇಶ್ ಹಿಟ್ನಾಳ ಹಾಗೂ ಎಸಿ ಗೋಪಾಲಕೃಷ್ಣ ಸಹಿ ಮಾಡಿಕೊಟ್ಟಿದ್ದು ಇದಾದ ಬಳಿಕವೇ ಆನಂದ ಅವರು ಲಸಿಕೆ ಪಡೆದುಕೊಂಡಿದ್ದಾರೆಂದು ಹೇಳಲಾಗಿದೆ.