ಪದೇಪದೇ ನೆಲ ಒರೆಸುವ ಕಾರಣಕ್ಕೆ ಅಥವಾ ಅಡುಗೆ ಪದಾರ್ಥಗಳು ಅಲ್ಲೇ ಉಳಿದುಕೊಳ್ಳುವ ಕಾರಣಕ್ಕೆ ಅಡುಗೆ ಮನೆಯು ಬಹುಬೇಗ ಬಣ್ಣ ಕಳೆದುಕೊಳ್ಳುತ್ತದೆ. ಹಾಗಾಗಿ ಅಡುಗೆ ಮನೆಯ ಟೈಲ್ಸ್ ಗಳನ್ನು ಸ್ವಚ್ಛವಾಗಿ ಇಟ್ಟುಕೊಳ್ಳುವುದು ಸವಾಲಿನ ಕೆಲಸ.
ಗೋಡೆಯ ಟೈಲ್ಸ್ ನ ಮೇಲೆ ಉಳಿದ ಕಲೆಗಳು ಯಾವ ರೀತಿಯದ್ದು ಎಂಬುದನ್ನು ಮೊದಲು ತಿಳಿದುಕೊಂಡ ಬಳಿಕ ಅದನ್ನು ಸ್ವಚ್ಛಗೊಳಿಸುವುದು ಒಳ್ಳೆಯದು. ಹಟಮಾರಿ ಕಲೆಗಳು ಬಹು ಬೇಗ ಹೋಗುವುದಿಲ್ಲ. ಅದಕ್ಕಾಗಿಯೇ ಬೆಚ್ಚಗಿನ ನೀರಿಗೆ ಸೋಪು ಹಾಕಿ ಕದಡಿ. ಸ್ವಚ್ಛ ಬಟ್ಟೆಯಿಂದ ಎರಡು ಬಾರಿ ತಿಕ್ಕಿ ತೊಳೆಯಿರಿ. ಇದರಿಂದ ಕಲೆಗಳು ದೂರವಾಗುತ್ತದೆ.
ನೆಲದ ಟೈಲ್ಸ್ ಸ್ವಚ್ಛ ಮಾಡುವುದು ಸುದೀರ್ಘ ಕೆಲಸ. ಏಕೆಂದರೆ ಈ ಭಾಗದಲ್ಲಿ ಪದೇ ಪದೇ ಕಲೆಗಳು ಕಾಣಿಸಿಕೊಳ್ಳುತ್ತಿರುತ್ತದೆ.
ಈ ಕಲೆಗಳನ್ನು ಹೋಗಲಾಡಿಸುವ ಮೊದಲು ನೆಲವನ್ನು ಸ್ವಚ್ಛವಾಗಿ ವ್ಯಾಕ್ಯುಮ್ ಮಾಡಿ. ಬಳಿಕ ಉತ್ತಮ ಗುಣಮಟ್ಟದ ಸೋಪ್ ನೀರಿನಿಂದ ಸ್ಕ್ರಬ್ ಮಾಡಿ. ಯಾವುದೇ ಕಾರಣಕ್ಕೆ ನೆಲ ಸಂಪೂರ್ಣವಾಗಿ ಒಣಗುವ ತನಕ ಓಡಾಡದಿರಿ.
ಅಡುಗೆ ಸೋಡಾವನ್ನು ಬಿಸಿನೀರಿಗೆ ಹಾಕಿ ಇಲ್ಲವೇ ವಿನೆಗರ್ ಹಾಕಿ ಪೇಸ್ಟ್ ತಯಾರಿಸಿ ನೆಲವನ್ನು ಸ್ಕ್ರಬ್ ಮಾಡಿದರೆ ಕಲೆಗಳು ದೂರವಾಗುತ್ತದೆ. ಇದನ್ನು ಹಾಕಿ 30 ನಿಮಿಷಗಳ ಬಳಿಕ ನೆಲವನ್ನು ತೊಳೆಯುವುದು ಒಳ್ಳೆಯದು. ಪ್ರತಿ ಬಾರಿ ಅಡುಗೆ ಕೆಲಸ ಮುಗಿದ ತಕ್ಷಣ ಅಡುಗೆ ಮನೆಯನ್ನು ಸ್ವಚ್ಛವಾಗಿ ಗುಡಿಸಿ ಒರೆಸಿ ಬಿಟ್ಟರೆ ಹೆಚ್ಚಿನ ಕಲೆಗಳ ಸಮಸ್ಯೆ ನಿಮ್ಮನ್ನು ಕಾಡುವುದಿಲ್ಲ.