ರಾಜ್ಯದ ಅಡಕೆ ಬೆಳೆಗಾರರ ಮೊಗದಲ್ಲಿ ಮತ್ತೆ ಮಂದಹಾಸ ಮೂಡಿದೆ. ಕಳೆದ ಎರಡು ತಿಂಗಳಿನಿಂದ ತೀವ್ರ ಕುಸಿತ ಕಂಡಿದ್ದ ಅಡಕೆ ಧಾರಣೆ ಈಗ ಮತ್ತೆ ಹಳಿಗೆ ಬಂದಿದ್ದು, ನೆಮ್ಮದಿ ಮೂಡಿಸಿದೆ. ಈ ಮೊದಲು ಅಡಿಕೆ ಬೆಲೆಯಲ್ಲಿ ಏಕಾಏಕಿ 8 ರಿಂದ 10 ಸಾವಿರದಷ್ಟು ಕುಸಿತ ಕಂಡಿದ್ದ ಪರಿಣಾಮ ಆತಂಕಗೊಂಡಿದ್ದ ಬೆಳೆಗಾರರು ಈಗ ನಿಟ್ಟುಸಿರುಬಿಟ್ಟಿದ್ದಾರೆ.
ಮಲೆನಾಡು ಭಾಗದಲ್ಲಿ ಅತಿ ಹೆಚ್ಚು ಅಡಿಕೆ ಬೆಳೆಯಲಾಗುತ್ತಿದ್ದು, ಅಲ್ಲದೆ ಈಗ ಭತ್ತದ ಗದ್ದೆ ತೆಗೆದು ಅಡಿಕೆ ತೋಟ ಮಾಡುವ ಪ್ರವೃತ್ತಿ ಹೆಚ್ಚಾಗುತ್ತಿದೆ. ಇಂತಹ ಸಂದರ್ಭದಲ್ಲಿ ಈಗಲೇ ಅಡಿಕೆ ಬೆಲೆಯಲ್ಲಿ ಇಷ್ಟು ಕಡಿಮೆಯಾದರೆ ಈಗ ಕಟ್ಟಿರುವ ತೋಟ ಫಸಲು ಕೊಡಲು ಆರಂಭಿಸಿದ ಬಳಿಕ ಮಾರುಕಟ್ಟೆಗೆ ಸಹಜವಾಗಿ ಹೆಚ್ಚಿನ ಪ್ರಮಾಣದಲ್ಲಿ ಅಡಿಕೆ ಬರಲಿದ್ದು, ಹೀಗಾಗಿ ಅಡಿಕೆಗೆ ಭವಿಷ್ಯವೇನು ಎಂಬ ಚಿಂತೆ ಬೆಳೆಗಾರರನ್ನು ಕಾಡುತ್ತಿತ್ತು.
ಇದೀಗ ಅಡಿಕೆ ಧಾರಣೆ ಡಿಸೆಂಬರ್ ಪೂರ್ವಕ್ಕೆ ಮರಳಿದ್ದು, ಸಹಜವಾಗಿಯೇ ಬೆಳೆಗಾರರಲ್ಲಿ ಹರ್ಷ ಮೂಡಿಸಿದೆ. ಈಗ ಮಲೆನಾಡಿನ ಹಸ (ಸರಕು) ಗರಿಷ್ಠ 78,200 ರೂಪಾಯಿಗಳಿಗೆ ತಲುಪಿದ್ದರೆ, ಬೆಟ್ಟೆ 52,200 ರೂಪಾಯಿಗಳಿಗೆ ಏರಿಕೆಯಾಗಿದೆ. ಇನ್ನು ರಾಶಿ ಅಡಿಕೆ 47,300 ರೂಪಾಯಿ, ಚಾಲಿ 42,552 (ಹಳೆಯದು) ತಲುಪಿದೆ. ಹಾಗೆಯೇ ಚಾಲಿ 37,500 (ಹೊಸ) ರೂಪಾಯಿ ಇದೆ. ಒಂದೊಂದು ಮಾರುಕಟ್ಟೆಯಲ್ಲಿ ಒಂದೊಂದು ಧಾರಣೆ ಲಭ್ಯವಾಗುತ್ತಿದ್ದು ವ್ಯತ್ಯಾಸ 200 ರಿಂದ 300 ರೂಪಾಯಿಗಳವರೆಗೆ ಇದೆ.