ಮೈಸೂರು: ಸೆಪ್ಟೆಂಬರ್ 28ರಂದು ಏಕಾಏಕಿ ಭೂತಾನ್ ದೇಶದಿಂದ 17 ಸಾವಿರ ಟನ್ ಹಸಿ ಅಡಿಕೆಯನ್ನು ಆಮದು ಮಾಡಿಕೊಳ್ಳಲು ಅನುಮತಿ ನೀಡಿ ಅಡಿಕೆ ಬೆಳೆಗಾರರ ಕತ್ತು ಹಿಸುಕುವ ಕೆಲಸಕ್ಕೆ ಕೈ ಹಾಕಿದೆ. ಅಲ್ಲದೆ ಇದು ರೈತರ ಪಾಲಿನ ಮರಣ ಶಾಸನ ಎಂದು ಕೆಪಿಸಿಸಿ ಸಹಕಾರ ವಿಭಾಗದ ರಾಜ್ಯ ಸಂಚಾಲಕರಾದ ಡಾ.ಆರ್.ಎಂ. ಮಂಜುನಾಥ ಗೌಡ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅವರು ಇಂದು ಕರ್ನಾಟಕದಲ್ಲಿ ಆರಂಭಗೊಳ್ಳುತ್ತಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರ ಪಾದಯಾತ್ರೆಯಲ್ಲಿ ಪಾಲ್ಗೊಳ್ಳುವ ಸಲುವಾಗಿ ಮೈಸೂರಿಗೆ ತೆರಳಿದ್ದು, ಅಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ, ಈ ವಿಷಯ ತಿಳಿಸಿದರು.
ಅಡಿಕೆ ಬೆಳೆ ಶಿವಮೊಗ್ಗ, ತೀರ್ಥಹಳ್ಳಿ, ಸಾಗರ, ಕೊಪ್ಪ, ಶೃಂಗೇರಿಯಂತಹ ಅತೀ ಹೆಚ್ಚು ಮಳೆ ಬೀಳುವ ಪ್ರದೇಶಗಳಲ್ಲಿ ರೈತರ ಅನಿವಾರ್ಯ ಜೀವನೋಪಾಯದ ಬೆಳೆಯಾಗಿದೆ. ಸಾಗರ ಹೊರತು ಉಳಿದ ಈ ಪ್ರದೇಶದಲ್ಲಿ ಅತೀವ ತೇವಾಂಶದ ಕಾರಣ ಬೇರಾವ ಬೆಳೆಯೂ ಬೆಳೆಯಲಾಗದ ಅನಿವಾರ್ಯ ಪರಿಸ್ಥಿತಿಯಲ್ಲಿ ರೈತರು ಇದ್ದಾರೆ. ಕಳೆದ 4 ದಶಕಗಳಿಂದ ಅಡಿಕೆ ಬೆಳೆ ಈ ಪ್ರದೇಶಗಳ ರೈತರ ಆರ್ಥಿಕ ಸ್ಥಿರತೆಗೆ ಹಾಗೂ ಈ ಎಲ್ಲಾ ಭಾಗಗಳ ಆರ್ಥಿಕ ಚಟುವಟಿಕೆಗಳ ಮೂಲಾಧಾರವಾಗಿದೆ. ಅದಲ್ಲದೆ ಅಡಿಕೆಗೆ ಎಲೆ ಚುಕ್ಕೆರೋಗ ತಗುಲಿ ಮರಗಳು ಸರ್ವನಾಶವಾಗಿದೆ. ಕಳೆದ 2 ವರ್ಷಗಳಿಂದ, ಅಧಿಕ ಮಳೆಯಿಂದಾಗಿ ಕೊಳೆರೋಗ ಜಾಸ್ತಿಯಾಗಿ ರೈತರು ವಿಪರೀತ ನಷ್ಟಕ್ಕೆ ಒಳಗಾಗಿದ್ದಾರೆ ಎಂದರು.
ಇಡೀ ರಾಜ್ಯದಲ್ಲಿ ಅಡಿಕೆಯನ್ನು ಲಕ್ಷಾಂತರ ರೈತರು ಬೆಳೆಯುತ್ತಿದ್ದಾರೆ. ಆದರೆ ಸದಾಕಾಲ ರೈತ ವಿರೋಧಿ ಧೋರಣೆಯನ್ನೇ ರೂಡಿಸಿಕೊಂಡು ಬಂದಿರುವ ಕೇಂದ್ರ ಸರ್ಕಾರ, 2017ರಲ್ಲಿ ಅಡಿಕೆಯ ಆಮದು ಬೆಲೆ ಕನಿಷ್ಠ ಕೆಜಿಗೆ 251 ರೂಪಾಯಿ ಇರಲೇಬೇಕು ಎಂಬ ಷರತ್ತನ್ನು ವಿಧಿಸಲಾಗಿತ್ತು. ಆದರೆ ಈ ಷರತ್ತನ್ನೇ ಈಗ ತೆಗೆದು ಹಾಕಿರುವುದು, ಇದು ಸ್ಪಷ್ಟವಾಗಿ ಗೋಚರಿಸುತ್ತಿದೆ, ಬಿಜೆಪಿಯಲ್ಲಿ ಗುರುತಿಸಿಕೊಂಡಿರುವ ಗುಟ್ಕಾ ಫ್ಯಾಕ್ಟರಿಗಳ ಮಾಲೀಕರ ಹಿತ ಕಾಯಲು ಎಂಬುದಕ್ಕೆ ಯಾವುದೇ ಪುರಾವೆ ಬೇಕಾಗಿಲ್ಲ ಎಂದು ಗೌಡರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಿಜವಾಗಿಯೂ ಅಡಿಕೆ ಬೆಳೆಗಾರರ ಹಿತ ಕಾಪಾಡಿದ್ದು ಮನಮೋಹನ್ ಸಿಂಗ್ ಅವರ ಸರ್ಕಾರ. ಅವರು ಪ್ರಧಾನಿಯಾಗಿದ್ದಾಗ ಕಳ್ಳ ಮಾರ್ಗದಲ್ಲಿ ಮಲೇಷಿಯಾ, ಇಂಡೋನೇಷಿಯಾ, ಮಯನ್ಮಾರ್, ಭೂತಾನ್ ಹಾಗೂ ಶ್ರೀಲಂಕ ಕಡೆಗಳಿಂದ ಆಮದಾಗುತ್ತಿದ್ದ ಅಡಿಕೆಯನ್ನು ಕಟ್ಟುನಿಟ್ಟಾಗಿ ನಿಯಂತ್ರಣಕ್ಕೆ ತಂದ ಕಾರಣ ಅಡಿಕೆಯ ಬೆಲೆ ಲಕ್ಷ ರೂಪಾಯಿ ದಾಟಿತ್ತು. ಆದರೆ ರೈತರ ಹೆಸರನ್ನು ಪದೇ ಪದೇ ಹೇಳಿಕೊಂಡು ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ಅಡಿಕೆ ಬೆಲೆ ಯಾವಾಗಲೂ ಕೂಡ ದೊಡ್ಡ ಮಟ್ಟದಲ್ಲಿ ಏರಲಿಲ್ಲ. ಇದಲ್ಲದೇ ಅಡಿಕೆ ಬೆಳೆ ಮಾರುಕಟ್ಟೆಗೆ ಬರುವ ಅಕ್ಟೋಬರ್ ತಿಂಗಳಿಗೆ ಸರಿಯಾಗಿ ಅಡಿಕೆ, ಗುಟ್ಕಾ ನಿಷೇಧದಂತಹ ವದಂತಿಯನ್ನು ಹರಡಿಸುವ ಮೂಲಕ ಬೆಲೆಯ ಮೇಲೆ ನಿಯಂತ್ರಣ ಸಾಧಿಸುತ್ತಿರುವುದು ಬಿಜೆಪಿ ಕೃಪಾಪೆÇೀಷಿತ ನಾಟಕ ಮಂಡಳಿಯೇ ಆಗಿದೆ ಎಂದು ಆರ್.ಎಂ. ಮಂಜುನಾಥ ಗೌಡ ಹೇಳಿದ್ದಾರೆ.
ಈ ತಕ್ಷಣವೇ ಕೇಂದ್ರ ಸರ್ಕಾರ ಕೂಡಲೇ ಅಡಿಕೆ ಆಮದು ನೀತಿಯನ್ನು ಕೈಬಿಟ್ಟು, ರೈತ ವಿರೋಧಿ ನೀತಿಯನ್ನು ನಿಲ್ಲಿಸದಿದ್ದರೆ, ಉಗ್ರ ಹೋರಾಟ ಅನಿವಾರ್ಯವಾಗುತ್ತದೆ ಎಂದು ಕೇಂದ್ರ ಸರ್ಕಾರವನ್ನು ಎಚ್ಚರಿಸಿದ್ದಾರೆ.