ಭೂತಾನ್ ಹಾಗೂ ಬಾಂಗ್ಲಾ ದೇಶದಿಂದ ಅಡಿಕೆ ಅಮದು ಮಾಡಿಕೊಳ್ಳಲು ಕೇಂದ್ರ ಸರ್ಕಾರ ನಿರ್ಧರಿಸಿದ ಬಳಿಕ ದೇಶಿಯ ಮಾರುಕಟ್ಟೆಯಲ್ಲಿ ಅಡಿಕೆ ಬೆಲೆಯಲ್ಲಿ ಭಾರಿ ಇಳಿಕೆಯಾಗಿತ್ತು. ಇದೀಗ ಕೇಂದ್ರ ಸರ್ಕಾರ ಕೈಗೊಂಡಿರುವ ನಿರ್ಧಾರವೊಂದು ಅಡಿಕೆ ಬೆಳೆಗಾರರಲ್ಲಿ ಸಂತಸ ಮೂಡಿಸುವಂತಿದೆ.
ಕೇಂದ್ರ ಸರ್ಕಾರ, ಅಡಿಕೆ ಆಮದಿನ ಮೇಲಿನ ದರ ಹೆಚ್ಚಳ ಮಾಡಿದ್ದು ಪ್ರತಿ ಕೆಜಿಗೆ 251 ರೂಪಾಯಿಯಿಂದ 351 ರೂಪಾಯಿಗೆ ಏರಿಕೆ ಮಾಡಲಾಗಿದೆ. ಹೀಗಾಗಿ ದೇಶಿಯ ಮಾರುಕಟ್ಟೆಯಲ್ಲಿ ಲಭ್ಯವಾಗುವ ಅಡಿಕೆ ಬೆಲೆ ಮತ್ತೆ ಹೆಚ್ಚಳವಾಗುವ ನಿರೀಕ್ಷೆ ಇದೆ.
ಕರ್ನಾಟಕದ ಎಂಟರಿಂದ ಹತ್ತು ಜಿಲ್ಲೆಗಳಲ್ಲಿ ಅಡಿಕೆಯೇ ಪ್ರಮುಖ ಬೆಳೆಯಾಗಿದ್ದು, ಇದರ ಜೊತೆಗೆ ಅಡಿಕೆಗೆ ಬೆಲೆ ಇರುವುದರಿಂದ ಇತರ ಜಿಲ್ಲೆಗಳಲ್ಲೂ ಇದು ವಿಸ್ತರಣೆಯಾಗಿತ್ತು. ಇದರ ಮಧ್ಯೆ ಕೇಂದ್ರ ಸರ್ಕಾರ ಅಡಿಕೆ ಅಮದು ಮಾಡಿಕೊಳ್ಳಲು ನಿರ್ಧರಿಸಿದ ಪರಿಣಾಮ ಬೆಲೆ ಇಳಿಕೆಯಾಗುವ ಆತಂಕ ಎದುರಾಗಿತ್ತು.
ಇದೀಗ ಅಡಿಕೆ ಆಮದಿನ ಮೇಲೆ ಕೇಂದ್ರ ಸರ್ಕಾರ ದರ ಹೆಚ್ಚಳ ಮಾಡಿರುವ ಕಾರಣ ದೇಶಿಯ ಮಾರುಕಟ್ಟೆಯಲ್ಲಿ ಮತ್ತೆ ಮೊದಲಿನ ಬೆಲೆ ಬರುವ ನಿರೀಕ್ಷೆ ಇದೆ. ಹೀಗಾಗಿ ಅಡಿಕೆ ಬೆಳೆಗಾರರು ಸಂತಸಗೊಂಡಿದ್ದಾರೆ.