ಅಡಿಕೆ ದರ ಹೆಚ್ಚಾಗಿರುವುದರಿಂದ ರೈತರು ಸಂತಸದಿಂದಿದ್ದರು. ಅಲ್ಲದೆ ಅಡಿಕೆ ಬೆಲೆಯಲ್ಲಿ ಸ್ಥಿರತೆ ಕಂಡುಬರುತ್ತಿರುವ ಕಾರಣ ಬಹಳಷ್ಟು ರೈತರು ಭತ್ತದ ಗದ್ದೆಗಳನ್ನು ತೆಗೆದು ಅಡಿಕೆ ಬೆಳೆಯತ್ತ ಮುಖ ಮಾಡಿದ್ದರು.
ಆದರೆ ವಿದೇಶದಿಂದ ಅಡಿಕೆ ಆಮದಾಗುತ್ತಿರುವ ಕಾರಣ ದರ ಕುಸಿಯುವ ಆತಂಕ ಈಗ ಎದುರಾಗಿತ್ತು. ಇದಕ್ಕೆ ಸಂಬಂಧಿಸಿದಂತೆ ಕ್ಯಾಂಪ್ಕೋ ಅಧ್ಯಕ್ಷ ಕಿಶೋರ್ ಕುಮಾರ್ ಕೊಡ್ಗಿ ಈಗ ಸ್ಪಷ್ಟನೆ ನೀಡಿದ್ದಾರೆ.
ಈ ಹಿಂದಿನಿಂದಲೂ ಪ್ರತಿವರ್ಷ ವಿದೇಶದಿಂದ ಅಡಿಕೆ ಭಾರತಕ್ಕೆ ಆಮದಾಗುತ್ತಿದ್ದು, ಈ ಬಾರಿಯೂ ಅಷ್ಟೇ ಪ್ರಮಾಣದ ಅಡಿಕೆ ಬಂದಿದೆ. ಇದನ್ನು ತಡೆಯಲು ಕ್ಯಾಂಪ್ಕೋ ಸರ್ವ ರೀತಿಯಲ್ಲೂ ಪ್ರಯತ್ನ ಮಾಡುತ್ತಿದ್ದು, ಕೇಂದ್ರ ಸರ್ಕಾರದ ಸಚಿವರು ಮತ್ತು ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ನಿರಂತರ ಸಂಪರ್ಕದಲ್ಲಿದೆ ಎಂದು ಹೇಳಿದ್ದಾರೆ.
ಮುಂಗಾರು ಆರಂಭವಾಗಿರುವ ಹಿನ್ನೆಲೆಯಲ್ಲಿ ಉತ್ತರ ಭಾರತದಲ್ಲಿ ಉಷ್ಣತೆ ಕಡಿಮೆಯಾಗಲಿದ್ದು ಮುಂದಿನ ದಿನಗಳಲ್ಲಿ ಅಡಿಕೆಗೆ ಬೇಡಿಕೆ ಹೆಚ್ಚಾಗಲಿದೆ. ಹೀಗಾಗಿ ರೈತರು ತಮಗೆ ಅವಶ್ಯಕತೆ ಇದ್ದರಷ್ಟೇ ಅಡಿಕೆ ಮಾರಾಟ ಮಾಡುವುದು ಸೂಕ್ತ ಎಂದು ಅವರು ಹೇಳಿದ್ದಾರೆ.