ಉತ್ತರ ಪ್ರದೇಶದ ರಾಯ್‌ಬರೇಲಿಯಲ್ಲಿ ಮೊಮ್ಮಗನೇ ಅಜ್ಜನನ್ನು ಕೊಂದು ಹಾಕಿದ್ದಾನೆ. ಸಲಿಕೆಯಿಂದ ಕತ್ತರಿಸಿ ಕ್ರೌರ್ಯ ಮೆರೆದಿದ್ದಾನೆ. ಅಜ್ಜ ತನಗೆ ಕಪಾಳ ಮೋಕ್ಷ ಮಾಡಿದ್ದಾನೆ ಅನ್ನೋ ಕೋಪದಲ್ಲಿ ಈ ಕೃತ್ಯ ಎಸಗಿದ್ದಾನೆ.
ಶತ್ರೋಹನ್ ಪಾಲ್ ಎಂಬ ಈ ವೃದ್ಧ ರಾತ್ರಿ ಜಮೀನಿಗೆ ಕಾವಲು ಕಾಯಲು ಹೋಗಿದ್ದ. ಈ ವೇಳೆ ಸಲಿಕೆಯಿಂದ ಹಲ್ಲೆ ಮಾಡಿ ಅವನನ್ನು ಹತ್ಯೆ ಮಾಡಲಾಗಿತ್ತು. ಮಹಾರಾಜ್ ಗಂಜ್ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿತ್ತು. ಈ ಪ್ರಕರಣದ ಬಗ್ಗೆ ತನಿಖೆ ನಡೆಸಿದಾಗ ಮೊಮ್ಮಗ ಮಾಡಿದ ದುಷ್ಕೃತ್ಯ ಬೆಳಕಿಗೆ ಬಂದಿದೆ.
ಮನೆ ನಿರ್ಮಾಣ ಕಾರ್ಯದ ಸಂದರ್ಭದಲ್ಲಿ ಗೋಡೆ ಕಟ್ಟುವ ವಿಚಾರಕ್ಕೆ ಶತ್ರೋಹನ್ ಮತ್ತವನ ಮೊಮ್ಮಗ ಸತೀಶ್ ರಾಯ್ ಮಧ್ಯೆ ಭಿನ್ನಾಭಿಪ್ರಾಯ ಶುರುವಾಗಿತ್ತು. ಇದೇ ವಿಚಾರದಲ್ಲಿ ಜಗಳವಾದಾಗ, ವೃದ್ಧ, ಮೊಮ್ಮಗನ ಕಪಾಳಕ್ಕೆ ಹೊಡೆದಿದ್ದರಂತೆ. ಇದರಿಂದ ಸತೀಶ್ ರೊಚ್ಚಿಗೆದ್ದಿದ್ದ, ತನಗೆ ಅವಮಾನ ಮಾಡಿದ ಅಜ್ಜನ ಮೇಲೆ ಸೇಡು ತೀರಿಸಿಕೊಳ್ಳಲು ಕಾಯುತ್ತಿದ್ದ.
ಅಜ್ಜ ಜಮೀನಿಗೆ ಹೋಗುವ ವಿಚಾರ ಗೊತ್ತಿದ್ದಿದ್ದರಿಂದ ಅಲ್ಲಿಗೇ ಹೋಗಿ ಹತ್ಯೆ ಮಾಡಿ ಪರಾರಿಯಾಗಿದ್ದ. ಈಗಾಗ್ಲೇ ಮೊಮ್ಮಗ ಸತೀಶ್‌ನನ್ನು ಪೊಲೀಸರು ಬಂಧಿಸಿ, ವಿಚಾರಣೆ ನಡೆಸ್ತಿದ್ದಾರೆ.