ಒಂದೂವರೆ ವರ್ಷದ ಹಿಂದೆ ತಂದೆ – ತಾಯಿಯನ್ನು ಕಳೆದುಕೊಂಡು ಅನಾಥಳಾಗಿದ್ದ 15 ವರ್ಷದ ಬಾಲಕಿ ಬೆಂಗಳೂರಿನ ತನ್ನ ಸಂಬಂಧಿಕರ ಮನೆಯಲ್ಲಿದ್ದು, ಕೊಡಗಿನಲ್ಲಿರುವ ಅಜ್ಜ – ಅಜ್ಜಿಯನ್ನು ನೋಡಲು ನಡೆದುಕೊಂಡೇ ಹೊರಟಿದ್ದ ಘಟನೆ ನಡೆದಿದೆ.
ಬೆಂಗಳೂರಿನ ಬನಶಂಕರಿ ಠಾಣಾ ವ್ಯಾಪ್ತಿಯಲ್ಲಿರುವ ತನ್ನ ಸಂಬಂಧಿ ಅಯ್ಯಪ್ಪ ಎಂಬವರ ಮನೆಯಲ್ಲಿ ಈ ಬಾಲಕಿ ವಾಸವಿದ್ದು, ಆಗಸ್ಟ್ 21 ರಂದು ಏಕಾಏಕಿ ನಾಪತ್ತೆಯಾಗಿದ್ದಳು. ಇದರಿಂದ ಗಾಬರಿಯಾದ ಅಯ್ಯಪ್ಪ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ಮನೆ ಸುತ್ತಮುತ್ತಲಿನ ಸಿಸಿ ಟಿವಿ ಪರಿಶೀಲಿಸಿದ ವೇಳೆ ಬಾಲಕಿ ಮೈಸೂರು ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿರುವ ದೃಶ್ಯ ಕಂಡು ಬಂದಿತ್ತು. ಆ ಬಳಿಕ ಬಾಲಕಿಯ ಫೋಟೋ ಸಮೇತ ಭಿತ್ತಿ ಪತ್ರಗಳನ್ನು ಮುದ್ರಿಸಿ ಎಲ್ಲೆಡೆ ಹಂಚಿಕೆ ಮಾಡಲಾಗಿತ್ತು.
ಈ ಬಾಲಕಿ ರಸ್ತೆಯಲ್ಲಿ ನಡೆದು ಸುಸ್ತಾದ ಬಳಿಕ ಬೆಂಗಳೂರಿನಿಂದ 30 ಕಿಮೀ ದೂರದ ತಾವರೆಕೆರೆ ಬಳಿ ಮಹಿಳೆಯೊಬ್ಬರಿಗೆ ಮನವಿ ಮಾಡಿ ಬಾಲಕಿ ಸ್ವಲ್ಪ ದಿನಗಳ ಕಾಲ ಆಶ್ರಯ ನೀಡುವಂತೆ ಮನವಿ ಮಾಡಿದ್ದಳು. ಇದು ಹೇಗೋ ಪೊಲೀಸರ ಕಿವಿ ತಲುಪಿ ಇದೀಗ ಬಾಲಕಿಯನ್ನು ಕರೆತಂದು ಸಂಬಂಧಿಕರ ವಶಕ್ಕೆ ನೀಡಿದ್ದಾರೆ.