ಥಾಣೆ: ಬಹುತೇಕ ಮಕ್ಕಳಿಗೆ ತಮ್ಮ ಅಜ್ಜಿಯ ಮನೆಗೆ ಹೋಗುವುದೆಂದ್ರೆ ಬಹಳ ಇಷ್ಟಪಡುತ್ತಾರೆ. ಅಜ್ಜಿಯ ಮನೆಯಲ್ಲಿ ಆಟ, ಊಟ ಎಲ್ಲವನ್ನೂ ಮಕ್ಕಳು ಬಹಳ ಆನಂದಿಸುತ್ತಾರೆ. ಆದರೆ, ಇಲ್ಲೊಬ್ಬ ಬಾಲಕ ತನ್ನನ್ನು ಪೋಷಕರು ಅಜ್ಜಿಯ ಮನೆಗೆ ಕರೆದುಕೊಂಡು ಹೋಗಿದ್ದಕ್ಕೆ ಓಡಿ ಹೋಗಿದ್ದಾನೆ.
ಮುಂಬೈನ ಉಪನಗರ ಗೋವಂಡಿಯ 9 ವರ್ಷದ ಬಾಲಕ ಪಾಲ್ಘರ್ ಜಿಲ್ಲೆಯ ವಸೈನಲ್ಲಿರುವ ತನ್ನ ಅಜ್ಜಿಯ ಮನೆಯಿಂದ ಓಡಿಹೋಗಿದ್ದಾನೆ. ಈತ ತಪ್ಪಿಸಿಕೊಂಡ ಒಂದು ದಿನದ ನಂತರ ತನ್ನ ಹೆತ್ತವರೊಂದಿಗೆ ಮತ್ತೆ ಸೇರಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಬಾಲಕ ಮಾರ್ಚ್ 23 ರಂದು ಥಾಣೆ ಜಿಲ್ಲೆಯ ಭಿವಂಡಿ ರಸ್ತೆ ರೈಲು ನಿಲ್ದಾಣದಲ್ಲಿ ಅಡ್ಡಾಡುತ್ತಿರುವುದನ್ನು ಸರ್ಕಾರಿ ರೈಲ್ವೆ ಪೊಲೀಸರು (ಜಿಆರ್‌ಪಿ) ಗಮನಿಸಿದ್ದಾರೆ. ಅಲ್ಲಿಂದ ಉಲ್ಲಾಸ್ ನಗರದಲ್ಲಿರುವ ಸರ್ಕಾರಿ ಬಾಲಾಪರಾಧಿಗೃಹಕ್ಕೆ ಕಳುಹಿಸಲಾಗಿದೆ.
ಬಾಲಕನ ಇಷ್ಟಕ್ಕೆ ವಿರುದ್ಧವಾಗಿ ಆತನ ಹೆತ್ತವರು ವಸೈನಲ್ಲಿರುವ ಅಜ್ಜಿಯ ಮನೆಗೆ ಕರೆದುಕೊಂಡು ಹೋಗಿದ್ದಾರೆ. ಆದರೆ, ಬಾಲಕನಿಗೆ ಸ್ವಲ್ಪವೂ ಇಷ್ಟವಿರಲಿಲ್ಲ. ಹೀಗಾಗಿ ಬಾಲಕ ತನ್ನ ಹೆತ್ತವರಿಂದ ತಪ್ಪಿಸಿಕೊಂಡು ಭಿವಂಡಿಗೆ ಪ್ರಯಾಣ ಬೆಳೆಸಿದ್ದಾನೆ.
ನೊಂದ ಪೋಷಕರು ಮಾರ್ಚ್ 22 ರಂದು ಪಾಲ್ಘರ್ ಪೊಲೀಸ್ ಠಾಣೆಯಲ್ಲಿ ಅಪಹರಣದ ಪ್ರಕರಣವನ್ನು ದಾಖಲಿಸಿದ್ದಾರೆ. ಆದರೆ, ಪತ್ತೆಯಾದ ನಂತರ ಬಾಲಕನನ್ನು ಪೋಷಕರ ಮಡಿಲಿಗೆ ಒಪ್ಪಿಸಲಾಗಿದೆ.