ಚಳಿಗಾಲದಲ್ಲಿ ದೇಹದ ಆಯಾ ಭಾಗಗಳಲ್ಲಿ ನೋವು ಕಾಣಿಸಿಕೊಳ್ಳುವುದು ಸಹಜ. ಮಸಾಜ್ ಮಾಡಿಸಿಕೊಂಡರೆ ಎಲ್ಲಾ ಸಮಸ್ಯೆ ಸರಿಯಾಗುತ್ತದೆ ಎಂದು ಯಾರೋ ಸಲಹೆ ನೀಡಿದರೆಂದು ನೀವು ಮಸಾಜ್ ಸೆಂಟರ್ ನತ್ತ ಹೊರಡುವ ಮುನ್ನ ಇಲ್ಲಿ ಕೇಳಿ.
ದೇಹಕ್ಕೆ ಆರಾಮ ಸಿಗಲಿ ಅಥವಾ ನೋವುಗಳಿಗೆ ಮುಕ್ತಿ ದೊರೆಯಲಿ ಎಂಬ ಕಾರಣಕ್ಕೆ ನೀವು ಮಸಾಜ್ ಕೇಂದ್ರಗಳಿಗೆ ಹೋಗುವವರಾದರೆ ವೈದ್ಯರ ಅಭಿಪ್ರಾಯ ಪಡೆದೇ ಹೋಗುವುದು ಒಳ್ಳೆಯದು. ಆಯುರ್ವೇದ ವೈದ್ಯರು ನಿಮ್ಮ ಸಮಸ್ಯೆಯ ಆಳವನ್ನು ಅರಿತು, ಯಾವ ಎಣ್ಣೆ ಎಷ್ಟು ಪ್ರಮಾಣದಲ್ಲಿ ಬೇಕು ಎಂಬುದನ್ನು ಖಚಿತವಾಗಿ ಹೇಳಬಲ್ಲರು.
ಯಾವುದೇ ಮಸಾಜ್ ನ ಲಾಭ ನಿಮಗೆ ಸಿಗಬೇಕಿದ್ದರೆ ಕನಿಷ್ಠ 7ರಿಂದ 10 ದಿನ ಬಿಡದೆ ಮಾಡಿಕೊಳ್ಳಬೇಕು. ಆಗ ಮಾತ್ರ ಇದರ ಲಾಭ ನಿಮಗೆ ದೊರೆಯಲು ಸಾಧ್ಯ. ನಿದ್ರಾಹೀನತೆ ಮತ್ತು ಅಜೀರ್ಣದ ಸಮಸ್ಯೆಯಿಂದ ಬಿಡುಗಡೆ ಹೊಂದಲೂ ಮಸಾಜ್ ಸಹಾಯ ಮಾಡುತ್ತದೆ.
ಸದ್ಯದ ಪರಿಸ್ಥಿತಿಯಲ್ಲಿ ಮಸಾಜ್ ಸೆಂಟರ್ ಗಳು ಸ್ವಚ್ಛತೆ ಎಷ್ಟರ ಮಟ್ಟಿಗೆ ಆದ್ಯತೆ ಕೊಡುತ್ತಿವೆ ಎಂಬುದನ್ನು ಪರಿಶೀಲಿಸಿಕೊಳ್ಳಿ. ಆಯುರ್ವೇದ ಆಸ್ಪತ್ರೆಯಲ್ಲಿರುವ ಮಸಾಜ್ ಕೇಂದ್ರಗಳನ್ನೇ ಆಯ್ದುಕೊಳ್ಳಿ. ಅವರು ಸಂಪೂರ್ಣ ತರಬೇತಿ ಪಡೆದಿರುತ್ತಾರೆ. ನಿಮ್ಮೆಲ್ಲಾ ಸಮಸ್ಯೆಗಳಿಗೆ ಬಹುಬೇಗ ಸೂಕ್ತ ಪರಿಹಾರ ಒದಗಿಸುತ್ತಾರೆ.