ತಪ್ಪಾದ ಆಹಾರ ಪದ್ಧತಿ ಮತ್ತು ಅಸ್ತವ್ಯಸ್ತ ಜೀವನಶೈಲಿಯಿಂದ ಏನಾಗಬಹುದು ಅನ್ನೋದಕ್ಕೆ ಈ ಮಹಿಳೆಯೇ ಜೀವಂತ ನಿದರ್ಶನ. ಇದೇ ಕಾರಣಕ್ಕೆ ಮಹಿಳೆಯ ತೂಕ 32ನೇ ವಯಸ್ಸಿನಲ್ಲೇ 317 ಕೆಜಿಗೆ ಏರಿತ್ತು. ವಿಪರೀತ ತೂಕ ಹೆಚ್ಚಳಕ್ಕೆ ಕಾರಣ ದೈಹಿಕ ಚಟುವಟಿಕೆಯ ಕೊರತೆ, ಜೊತೆಗೆ ಹಾರ್ಮೋನ್‌ಗಳ ಅಸಮತೋಲನ. ಮಿಸ್ಸಿಸ್ಸಿಪ್ಪಿಯ ನಿವಾಸಿ ಕ್ರಿಸ್ಟಿನಾ ಫಿಲಿಪ್ಸ್ ಎಂಬ ಮಹಿಳೆಯ ಬದುಕಿನಲ್ಲಿ ನಡೆದ ಘಟನೆಗಳಿವು.
ಎಂಥವರನ್ನೂ ದಿಗ್ಭ್ರಮೆಗೊಳಿಸುವಂತಿದೆ ಮಹಿಳೆಯ ಬದುಕಿನಲ್ಲಾದ ಪರಿವರ್ತನೆ. ಪ್ರಪಂಚದ ಅತ್ಯಂತ ತೂಕದ ಮಹಿಳೆಯರಲ್ಲಿ ಕ್ರಿಸ್ಟಿನಾ ಕೂಡ ಒಬ್ಬಳಾಗಿದ್ದಳು. ಕೇವಲ 12ನೇ ವಯಸ್ಸಿನಲ್ಲೇ ಕ್ರಿಸ್ಟಿನಾ ತೂಕ ಸುಮಾರು 136 ಕೆಜಿ ಇತ್ತು. ಸುಮಾರು ಎರಡು ವರ್ಷಗಳ ಕಾಲ ಆಕೆ ಹಾಸಿಗೆಯ ಮೇಲೆಯೇ ಜೀವನ ಕಳೆದಿದ್ದಾಳೆ. ಕ್ರಿಸ್ಟಿನಾಗೆ ಬಾಲ್ಯದಲ್ಲಿ ಪದೇ ಪದೇ ಹಸಿವಾಗುತ್ತಿತ್ತು. ಅದಕ್ಕಾಗಿಯೇ ಅವಳು ದಿನಕ್ಕೆ ಹಲವಾರು ಬಾರಿ ಆಹಾರವನ್ನು ಸೇವಿಸುತ್ತಿದ್ದಳು. ಸಾಕಷ್ಟು ಫಾಸ್ಟ್ ಫುಡ್‌ಗಳನ್ನು ತಿನ್ನುತ್ತಿದ್ಲು. ಈ ಸಮಯದಲ್ಲಿ, ಅವಳ ದೈಹಿಕ ಚಟುವಟಿಕೆಯು ತುಂಬಾ ಕಡಿಮೆಯಾಗಿತ್ತು. ಹಾಗಾಗಿ ತೂಕ ಮತ್ತಷ್ಟು ಹೆಚ್ಚಾಯಿತು.
ತೂಕ ಇಳಿಸಿಕೊಳ್ಳಲು ಕ್ರಿಸ್ಟಿನಾ ವೈದ್ಯರ ಸಲಹೆ ಕೇಳಿದ್ದಾಳೆ. ವೈದ್ಯರು ಬೈಪಾಸ್ ಸರ್ಜರಿ ಹಾಗೂ ಆರೋಗ್ಯಕರ ಆಹಾರ ಕ್ರಮ ಅನುಸರಿಸುವಂತೆ ಸಲಹೆ ನೀಡಿದರು. ಗ್ಯಾಸ್ಟ್ರಿಕ್ ಬೈಪಾಸ್ ಶಸ್ತ್ರಚಿಕಿತ್ಸೆಗೆ ಮುಂದಾದಾಗ ಕ್ರಿಸ್ಟಿನಾಳ ಪತಿ ಸಹಕರಿಸಲೇ ಇಲ್ಲ. ವಿಪರೀತ ದಪ್ಪಗಿದ್ದಾಳೆಂದು ಆತ ಪತ್ನಿಯನ್ನು ನಿಂದಿಸುತ್ತಿದ್ದ. ಬೇಸತ್ತ ಆಕೆ ಪತಿಗೆ ವಿಚ್ಛೇದನ ನೀಡಿದ್ದಳು. ನಂತರ ಗ್ಯಾಸ್ಟ್ರಿಕ್ ಬೈಪಾಸ್ ಶಸ್ತ್ರಚಿಕಿತ್ಸೆಯ ಸಹಾಯದಿಂದ ತೂಕವನ್ನು ಕಡಿಮೆ ಮಾಡಿಕೊಂಡಿದ್ದಾಳೆ. ಸದ್ಯ ಕ್ರಿಸ್ಟಿನಾಳ ತೂಕ 90 ಕೆ.ಜಿ. ಸದ್ಯ ಅತ್ಯಂತ ಆರೋಗ್ಯಕರ ಆಹಾರವನ್ನು ಕ್ರಿಸ್ಟಿನಾ ಸೇವಿಸುತ್ತಾಳೆ. ನಿಯಮಿತವಾಗಿ ಡಯಟ್ ಫಾಲೋ ಮಾಡುತ್ತಾಳೆ. ಜಂಕ್ ಫುಡ್, ಫಾಸ್ಟ್ ಫುಡ್‌ಗಳಿಂದ ದೂರವಿದ್ದಾಳೆ. ಹಾಗಾಗಿಯೇ 226 ಕೆಜಿ ತೂಕ ಇಳಿಸಿಕೊಳ್ಳಳು ಕ್ರಿಸ್ಟಿನಾಗೆ ಸಾಧ್ಯವಾಗಿದೆ.