ಕರ್ಪೂರಕ್ಕೆ ಧಾರ್ಮಿಕವಾಗಿ ಸಾಕಷ್ಟು ಮಹತ್ವವಿದೆ. ಪೂಜೆ, ಹೋಮ ಹವನಗಳಿಗೆ ಕರ್ಪೂರ ಬೇಕೇ ಬೇಕು. ಆದ್ರೆ ಈ ಕರ್ಪೂರದಲ್ಲಿ ಬಹಳಷ್ಟು ಔಷಧೀಯ ಗುಣಗಳಿವೆ. ಒಂದು ಚಿಟಿಕೆ ಕರ್ಪೂರ ಹಲವಾರು ಆರೋಗ್ಯ ಸಮಸ್ಯೆಗಳನ್ನು ನಿವಾರಿಸಬಲ್ಲದು. ಇದರಲ್ಲಿ ಬ್ಯಾಕ್ಟೀರಿಯಾ ವಿರೋಧಿ ಗುಣಗಳಿವೆ. ಹಾಗಾಗಿ ನೈಸರ್ಗಿಕ ಕರ್ಪೂರವು ದೇಹದ ಅನೇಕ ಸಮಸ್ಯೆಗಳನ್ನು ಹೋಗಲಾಡಿಸುತ್ತದೆ.
ತಲೆನೋವು: ಕರ್ಪೂರದ ಬಳಕೆಯಿಂದ ದೇಹ ತಂಪಾಗುತ್ತದೆ. ತಲೆನೋವಿನ ಸಮಸ್ಯೆ ಇದ್ದರೆ ಬಿಳಿ ಚಂದನ ಮತ್ತು ಶುಂಠಿಯೊಂದಿಗೆ ಕರ್ಪೂರವನ್ನು ಬೆರೆಸಿ ಹಚ್ಚುವುದರಿಂದ ಪರಿಹಾರ ದೊರೆಯುತ್ತದೆ. ಈ ಮೂರು ವಸ್ತುಗಳನ್ನು ಸಮಪ್ರಮಾಣದಲ್ಲಿ ಬೆರೆಸಿ ಪೇಸ್ಟ್ ಮಾಡಿ ಹಣೆಗೆ ಹಚ್ಚಿಕೊಳ್ಳಬೇಕು.
ಕೂದಲಿನ ಆರೋಗ್ಯ: ಕರ್ಪೂರವು ತಲೆಹೊಟ್ಟು, ಶುಷ್ಕತೆ, ಕೂದಲು ಉದುರುವಿಕೆಯಂತಹ ಸಮಸ್ಯೆಗಳನ್ನು ನಿವಾರಿಸುತ್ತದೆ. ಕೊಬ್ಬರಿ ಎಣ್ಣೆಯನ್ನು ಕರ್ಪೂರದೊಂದಿಗೆ ಬೆರೆಸಿ ಹಚ್ಚುವುದರಿಂದ ಕೂದಲು ಉದುರುವುದು ನಿಲ್ಲುತ್ತದೆ ಮತ್ತು ಹೊಳಪು ಬರುತ್ತದೆ. ನೀವು ದಪ್ಪ ಮತ್ತು ಉದ್ದ ಕೂದಲು ಬಯಸಿದರೆ, ತೆಂಗಿನ ಎಣ್ಣೆಯನ್ನು ಕರ್ಪೂರದೊಂದಿಗೆ ಬೆರೆಸಿ ಹಚ್ಚುವುದು ಪ್ರಯೋಜನಕಾರಿ.
ಶೀತಕ್ಕೆ ಮದ್ದು: ಶೀತ ಮತ್ತು ಜ್ವರಕ್ಕೂ ಕರ್ಪೂರವನ್ನು ಮದ್ದಾಗಿ ಬಳಸಬಹುದು. ಶೀತ-ನೆಗಡಿ, ಕೆಮ್ಮಿನ ಸಂದರ್ಭದಲ್ಲಿ ಕರ್ಪೂರವನ್ನು ಬೆಚ್ಚಗಿನ ಸಾಸಿವೆ ಎಣ್ಣೆಯೊಂದಿಗೆ ಬೆರೆಸಿ ಮಸಾಜ್ ಮಾಡಬೇಕು. ಬಿಸಿನೀರಿಗೆ ಕರ್ಪೂರವನ್ನು ಹಾಕಿ ಹಬೆ ತೆಗೆದುಕೊಳ್ಳುವುದರಿಂದ ಮೂಗು ಕಟ್ಟಿಕೊಳ್ಳುವುದಿಲ್ಲ. ನೆಗಡಿ ಮತ್ತು ಜ್ವರದಿಂದ ಉಪಶಮನ ದೊರೆಯುತ್ತದೆ.
ನೋವಿಗೆ ಪರಿಹಾರ: ಪಾದಗಳಲ್ಲಿ ನೋವು ಮತ್ತು ಊತದ ಸಮಸ್ಯೆ ಇದ್ದರೆ ಎಣ್ಣೆಗೆ ಕರ್ಪೂರವನ್ನು ಬೆರೆಸಿ ಮಸಾಜ್ ಮಾಡುವುದರಿಂದ ಪರಿಹಾರ ದೊರೆಯುತ್ತದೆ. ಎಳ್ಳು ಅಥವಾ ಸಾಸಿವೆ ಎಣ್ಣೆಯೊಂದಿಗೆ ಕರ್ಪೂರವನ್ನು ಬೆರೆಸಿ ಮಸಾಜ್ ಮಾಡಿದರೆ ಪ್ರಯೋಜನ ದುಪ್ಪಟ್ಟಾಗುತ್ತದೆ.
ಮೊಡವೆಗಳಿಗೆ ಪರಿಹಾರ: ಕರ್ಪೂರದಲ್ಲಿ ಬ್ಯಾಕ್ಟೀರಿಯಾ ವಿರೋಧಿ ಗುಣವಿದೆ. ಕರ್ಪೂರದ ಬಳಕೆಯಿಂದ ಮೊಡವೆಗಳು ಹೋಗುತ್ತವೆ. ಇದು ಮೊಡವೆಗಳು ಬೆಳೆಯದಂತೆ ಬ್ಯಾಕ್ಟೀರಿಯಾವನ್ನು ದೂರವಿಡುತ್ತದೆ.
ಕಲೆಗಳ ನಿವಾರಣೆ: ಮುಖದಲ್ಲಿ ಮೊಡವೆ ಅಥವಾ ಇನ್ಯಾವುದೇ ಗಾಯದ ಕಲೆಗಳಿದ್ದರೆ ಕರ್ಪೂರದಿಂದ ಅದು ನಿವಾರಣೆಯಾಗುತ್ತದೆ.ತೆಂಗಿನ ಎಣ್ಣೆಯಲ್ಲಿ ಕರ್ಪೂರವನ್ನು ಬೆರೆಸಿ ಮುಖಕ್ಕೆ ಹಚ್ಚಬೇಕು. ಕಲೆಗಳು ಮಾಯವಾಗುತ್ತವೆ ಜೊತೆಗೆ ಚರ್ಮ ಕಾಂತಿಯುಕ್ತವಾಗುತ್ತದೆ.