ಜೀವನದ ಬಹುಮುಖ್ಯ ಘಟ್ಟವಾದ ಮದುವೆಗಿಂತ ಕೆಲವರಿಗೆ ರಾಜಕೀಯನೇ ಮುಖ್ಯ. ಅಯೋಧ್ಯೆಯ ಸಮಾಜವಾದಿ ಪಕ್ಷದ ಕಾರ್ಪೊರೇಟರ್ ಒಬ್ಬರು ಅದನ್ನು ಸಾಬೀತುಪಡಿಸಿದ್ದಾರೆ.
ಉತ್ತರ ಪ್ರದೇಶದ ಮುನ್ಸಿಪಲ್ ಚುನಾವಣೆ ಘೋಷಣೆಯಾಗಿದ್ದರಿಂದ ಕಾರ್ಪೊರೇಟರ್ ಮಹೇಂದ್ರ ಶುಕ್ಲಾ ಅವರು ನಿಗದಿತ ದಿನಾಂಕಕ್ಕಿಂತ ಮೊದಲೇ ಮದುವೆಯಾಗಿದ್ದಾರೆ. ಅದಕ್ಕೆ ಕಾರಣ ಮಹಿಳಾ ಮೀಸಲಾತಿ. ತಮ್ಮ ವಾರ್ಡ್ ಅನ್ನು ಮಹಿಳೆಯರಿಗೆ ಮೀಸಲಿಟ್ಟ ನಂತರ ತಮ್ಮ ವಿವಾಹವನ್ನು ನಿಗದಿತ ದಿನಾಂಕಕ್ಕಿಂತ ಮುಂಚೆಯೇ ಮಾಡಿಕೊಂಡಿದ್ದಾರೆ. ಅಯೋಧ್ಯೆ ಮುನಿಸಿಪಲ್ ಕಾರ್ಪೊರೇಶನ್ನ ಸ್ವರ್ಗದ್ವಾರ ವಾರ್ಡ್ಗೆ ಮಹಿಳಾ ಮೀಸಲಾತಿಯಿದ್ದು ಆ ವಾರ್ಡ್ ನಲ್ಲಿ ತಮ್ಮ ಪತ್ನಿ ಸ್ಪರ್ಧಿಸುವಂತೆ ಮಾಡಲು ಅವರು ಮುಂಚೆಯೇ ಮದುವೆಯಾಗಿದ್ದಾರೆ.
ಮೀಸಲು ವಾರ್ಡ್ಗಳ ಪಟ್ಟಿಯನ್ನು ಡಿಸೆಂಬರ್ 1 ರಂದು ಬಿಡುಗಡೆ ಮಾಡಿದ್ರೆ, ಶುಕ್ಲಾ ಒಂದು ದಿನದ ನಂತರ ಹೆಂಡತಿಗೆ ಮೂರು ಗಂಟು ಹಾಕಿದರು. ನನಗೆ ಈಗಾಗಲೇ ನಿಶ್ಚಿತಾರ್ಥವಾಗಿತ್ತು. ಮುಂದಿನ ವರ್ಷ ಜನವರಿಯಲ್ಲಿ ನಾವು ಮದುವೆಯಾಗಲು ಯೋಜಿಸಿದ್ದೆವು. ಆದರೆ ನಮ್ಮ ವಾರ್ಡ್ ಸೀಟು ಮಹಿಳೆಯರಿಗೆ ಮೀಸಲಾಗಿದೆ ಎಂದು ಘೋಷಿಸಿದಾಗ ನಾವು ಮುಂಚಿತವಾಗಿ ಮದುವೆಯಾಗಲು ನಿರ್ಧರಿಸಿದೆವು ಎಂದು ಅವರು ಹೇಳಿದರು.
ನಾನು ಕಳೆದ ಐದು ವರ್ಷಗಳಿಂದ ನನ್ನ ಕ್ಷೇತ್ರದ ಜನರಿಗಾಗಿ ಶ್ರಮಿಸಿದ್ದೇನೆ ಮತ್ತು ರಾಜಕೀಯದಲ್ಲಿ ಮುಂದುವರಿಯಲು ಬಯಸುತ್ತೇನೆ. ಇದಕ್ಕಾಗಿ, ಪುರಸಭೆ ಚುನಾವಣೆಯಲ್ಲಿ ನನ್ನ ಕುಟುಂಬದ ಮಹಿಳಾ ಅಭ್ಯರ್ಥಿ ಸ್ಪರ್ಧಿಸಿದರೆ ಉತ್ತಮ ಎಂದು ನಾನು ಭಾವಿಸಿದ್ದೇನೆ ಮತ್ತು ನನ್ನ ಹೆಂಡತಿಗಿಂತ ಯಾರು ಉತ್ತಮರು? ಎಂದಿದ್ದಾರೆ. ಉತ್ತರ ಪ್ರದೇಶದ ಮುನ್ಸಿಪಲ್ ಚುನಾವಣೆ ಈ ತಿಂಗಳ ಕೊನೆಯಲ್ಲಿ ನಡೆಯಲಿದೆ.