ಭಾರತದ ಬಾಡಿ ಬಿಲ್ಡರ್ ದೀಪಕ್ ನಂದಾ ಅವರದ್ದು ಅತ್ಯಂತ ಸ್ಪೂರ್ತಿದಾಯಕ ಬದುಕು. ಇವರನ್ನು ರಾಕ್ ಆಫ್ ಇಂಡಿಯಾ ಎಂದೂ ಕರೆಯುತ್ತಾರೆ. ಮೊದಲು ದೀಪಕ್ ಅಂಗಡಿಯಲ್ಲಿ ನೀರು ಸಪ್ಲೈ ಕೆಲಸ ಮಾಡುತ್ತಿದ್ರು. ಮುಂಬೈನಲ್ಲಿ ನಡೆದ ಅಂತಾರಾಷ್ಟ್ರೀಯ ದೇಹದಾರ್ಢ್ಯ ಪ್ರದರ್ಶನದಲ್ಲಿ ದೀಪಕ್ ನಂದಾ ಕಾಣಿಸಿಕೊಂಡಿದ್ದಾರೆ.
‘ಅಮೆಚೂರ್ ಒಲಂಪಿಯಾ ಐಎಫ್ಬಿಬಿ ಪ್ರೊ ಶೋ’ನ ‘ಓವರ್ ಆಲ್ ಇನ್ ಕ್ಲಾಸಿಕ್’ ವಿಭಾಗದಲ್ಲಿ ದೇಹದಾರ್ಢ್ಯ ಪಟು ದೀಪಕ್ ನಂದಾ ತಮ್ಮ ಕಠಿಣ ಪರಿಶ್ರಮದಿಂದ ಪ್ರೊ ಕಾರ್ಡ್ ಗೆದ್ದಿದ್ದಾರೆ. ಈ ಸ್ಪರ್ಧೆಯಲ್ಲಿ ದೀಪಕ್ ಜೊತೆಗೆ 243 ಮಂದಿ ಪಾಲ್ಗೊಂಡಿದ್ದರು. ದೀಪಕ್ ದೆಹಲಿಯ ಮಧ್ಯಮ ವರ್ಗದ ಕುಟುಂಬಕ್ಕೆ ಸೇರಿದವರು. ಎಂಟನೇ ತರಗತಿಯಲ್ಲಿದ್ದಾಗಲೇ ಸಣ್ಣ ಪುಟ್ಟ ಕೆಲಸ ಮಾಡುತ್ತಿದ್ದರು. ನಂತರ ಸೇಲ್ಸ್ ಮ್ಯಾನ್ ಆಗಿದ್ದರು.
ಹೀಗೆ ದುಡಿಮೆ ಮಾಡಿಕೊಂಡೇ ಓದು ಮುಗಿಸಿದ ದೀಪಕ್, ಬಾಡಿ ಬಿಲ್ಡರ್ ಆಗಬೇಕೆಂದು ಬಯಸಿರಲೇ ಇಲ್ಲ. ಮದುವೆಯಾದ ಬಳಿಕ ದೀಪಕ್ ಬದುಕಿನ ಚಿತ್ರಣವೇ ಬದಲಾಯ್ತು. ಬಾಡಿ ಬಿಲ್ಡರ್ ಆಗುವಂತೆ ಪತ್ನಿ ರೂಪಲ್, ಅವರನ್ನು ಹುರಿದುಂಬಿಸಿದರಂತೆ. 5 ಅಡಿ 10 ಇಂಚು ಎತ್ತರವಿರುವ ದೀಪಕ್ ತೂಕ 93 ಕೆಜಿ. ಅವರ ಡಯಟಿಂಗ್ ಕೇಳಿದ್ರೆ ನೀವು ಶಾಕ್ ಆಗೋದು ಗ್ಯಾರಂಟಿ. ಪ್ರತಿದಿನ 2 ಕೆಜಿ ಚಿಕನ್ ತಿನ್ನುತ್ತಾರೆ ಈತ. 10 ಮೊಟ್ಟೆಗಳು ಮತ್ತು ಸುಮಾರು ಒಂದು ಕೆಜಿ ಅಕ್ಕಿಯಿಂದ ಮಾಡಿದ ಅನ್ನವನ್ನು ಸೇವಿಸ್ತಾರೆ. ಇದರೊಂದಿಗೆ ಹಸಿರು ತರಕಾರಿಗಳನ್ನು ಸಹ ತಿನ್ನುತ್ತಾರೆ.
ಚಿಯಾ ಸೀಡ್ಸ್ ಮತ್ತು ಓಟ್ಸ್ ಅನ್ನು 6 ಬಾರಿ ತೆಗೆದುಕೊಳ್ಳುತ್ತಾರೆ. ಈ ಆಹಾರ ಕ್ರಮವನ್ನು ದೀಪಕ್ ತಪ್ಪದೇ ಅನುಸರಿಸುತ್ತಾರೆ. ಸ್ಪರ್ಧೆ ಯಾವುದೇ ಆಗಿದ್ದರು ಕಠಿಣ ಪರಿಶ್ರಮ ಪಟ್ಟು ಅದಕ್ಕೆ ಸಿದ್ಧರಾಗುತ್ತಾರೆ. ಮುಂಬೈನಲ್ಲಿ ನಡೆದ ಈ ಸ್ಪರ್ಧೆಯಲ್ಲಿ 89 ಕೆಜಿ ವಿಭಾಗದಲ್ಲಿ ಭಾಗವಹಿಸಿದ ದೀಪಕ್ 12 ಗಂಟೆಗಳಲ್ಲಿ 4 ಕೆಜಿ ತೂಕ ಇಳಿಸುವ ಮೂಲಕ ಸಾಮಾನ್ಯ ಜನರನ್ನು ಒಮ್ಮೆ ಅಚ್ಚರಿಗೊಳಿಸಿದರು.