ವ್ಯಕ್ತಿಯ ಹೆಸರಿನ ಜೊತೆ ಉಪನಾಮಕ್ಕೂ ಅಷ್ಟೇ ಮಹತ್ವವಿದೆ. ಕೆಲವರು ತಮ್ಮ ಹೆಸರಿಗಿಂತ ಉಪನಾಮದಿಂದಲೇ ಪ್ರಸಿದ್ಧರಾಗಿದ್ದಾರೆ. ಇದೀಗ ಚೀನಾದಲ್ಲಿ ‘ಮಾ’ ಎಂಬ ಉಪನಾಮದ ವ್ಯಕ್ತಿಯ ಬಂಧನದ ಕೆಲವೇ ನಿಮಿಷಗಳಲ್ಲಿ ಜಾಕ್ ಮಾ ಅವರ ಅಲಿಬಾಬಾ ಕಂಪನಿಗೆ ಶತಕೋಟಿ ಡಾಲರ್ ನಷ್ಟಕ್ಕೆ ಕಾರಣವಾಗಿದೆ.
ಚೀನಾದ ಹ್ಯಾಂಗ್ಝೌ ನಗರದಲ್ಲಿ ‘ಮಾ’ ಎಂಬ ಉಪನಾಮ ಹೊಂದಿರುವ ವ್ಯಕ್ತಿಯನ್ನು ದೇಶವನ್ನು ವಿಭಜಿಸಲು ಪ್ರಯತ್ನಿಸುತ್ತಿದ್ದಾರೆ ಎಂಬ ಶಂಕೆಯ ಮೇಲೆ ಬಂಧಿಸಲಾಗಿದೆ. ಇದನ್ನು ತಪ್ಪಾಗಿ ಜನರು ಆ ವ್ಯಕ್ತಿಯನ್ನು ಜಾಕ್ ಮಾ ಅಂತಾ ಅಂದುಕೊಂಡಿದ್ದಾರೆ. ಇದರ ಪರಿಣಾಮವಾಗಿ, ಜಾಕ್ ಮಾ ಸಹ-ಸ್ಥಾಪಿತವಾದ ಅಲಿಬಾಬಾ ಷೇರುಗಳು ಮಂಗಳವಾರ ಹಾಂಗ್ ಕಾಂಗ್ನಲ್ಲಿ ಶೇಕಡಾ 9.4 ರಷ್ಟು ಕುಸಿತ ಕಂಡವು. ಇ-ಕಾಮರ್ಸ್ ದೈತ್ಯ ಕೆಲವೇ ನಿಮಿಷಗಳಲ್ಲಿ ಮಾರುಕಟ್ಟೆ ಮೌಲ್ಯದಲ್ಲಿ ಸುಮಾರು $26 ಬಿಲಿಯನ್ ನಷ್ಟವನ್ನು ಎದುರಿಸಿತು.
ನಂತರ, ಗ್ಲೋಬಲ್ ಟೈಮ್ಸ್ ಆ ವ್ಯಕ್ತಿ ಜಾಕ್ ಮಾ ಅಲ್ಲ ಎಂದು ಸ್ಪಷ್ಟಪಡಿಸಿತು. ಆರೋಪಿಯು 1985 ರಲ್ಲಿ ಜನಿಸಿದ್ದು, ಐಟಿ ಇಲಾಖೆಯ ನಿರ್ದೇಶಕರಾಗಿದ್ದು, ಅವರ ಹೆಸರಿನಲ್ಲಿ ಮೂರು ಚೈನೀಸ್ ಅಕ್ಷರಗಳಿವೆ. ಆದರೆ, ಜಾಕ್ ಮಾ ಅವರ ಚೈನೀಸ್ ಹೆಸರು, ಮಾ ಯುನ್ ಆಗಿದೆ. ಇದು ಕೇವಲ ಎರಡು ಅಕ್ಷರಗಳನ್ನು ಮಾತ್ರ ಹೊಂದಿದೆ. ಅವರು 1960ರ ದಶಕದಲ್ಲಿ ಜನಿಸಿದ್ರು ಅಂತಾ ಸ್ಪಷ್ಟಪಡಿಸಬೇಕಾಯ್ತು.
ನಿಜ ವಿಷಯ ಅರಿತ ಕೂಡಲೇ ಅಲಿಬಾಬಾ ಷೇರುಗಳು ಏರಿಕೆ ಕಂಡಿವೆ. ಅಲಿಬಾಬಾ ದಿನದ ಅಂತ್ಯದ ವೇಳೆಗೆ ಅದರ ಹೆಚ್ಚಿನ ನಷ್ಟದಿಂದ ಚೇತರಿಸಿಕೊಂಡಿತು.