ದೆಹಲಿ ಆರ್‌ಟಿಓ ಕಚೇರಿಗಳಲ್ಲಿ ತಮ್ಮ ವಾಹನ ನೋಂದಣಿ ಮಾಡಿಸಿಕೊಳ್ಳಲು ಇಚ್ಛಿಸುವ ದ್ವಿಚಕ್ರ ವಾಹನಗಳ ಮಾಲೀಕರಿಗೆ ಇತ್ತೀಚಿನ ದಿನಗಳಲ್ಲಿ ವಿಚಿತ್ರವಾದ ಸಮಸ್ಯೆಯೊಂದು ಕಾಣಿಸಿಕೊಂಡಿದೆ.
ದೆಹಲಿಯಲ್ಲಿ ದ್ವಿಚಕ್ರ ವಾಹನಗಳನ್ನು ’S’ ಅಕ್ಷರದಿಂದ ಗುರುತಿಸಲಾಗುತ್ತದೆ. ಸಾಮಾನ್ಯವಾಗಿ ದೆಹಲಿಯಲ್ಲಿ ವಾಹನಗಳ ನೋಂದಣಿ ಸಂಖ್ಯಾ ಫಲಕದಲ್ಲಿ ‘DL’ನಿಂದ ಸಂಖ್ಯೆ ಆರಂಭವಾಗುತ್ತದೆ. ಇದಾದ ಬಳಿಕ ಜಿಲ್ಲೆಯ ಸೂಚಕ ಸಂಖ್ಯೆ, ಬಳಿಕ ವಾಹನದ ವಿಧದ ಆಧಾರದ ಮೇಲೆ ಅಕ್ಷರವೊಂದನ್ನು ನೀಡಲಾಗುತ್ತದೆ. ಇದಾದ ಮೇಲೆ ಇತ್ತೀಚಿನ ಸರಣಿಯನ್ನು ಸೂಚಿಸುವ ಎರಡು ಅಕ್ಷರಗಳು ಬರುತ್ತವೆ. ಇವೆಲ್ಲಾ ಆದ ಮೇಲೆ 4 ಅಂಕಿಯ ವಿಶಿಷ್ಟ ಸಂಖ್ಯೆಯ ಮೂಲಕ ವಾಹನದ ನೋಂದಣಿ ಸಂಖ್ಯೆ ಮುಕ್ತಾಯವಾಗುತ್ತದೆ.
ಉದಾಹರಣೆಗೆ: ವಾಹನ ನೋಂದಣಿ ಸಂಖ್ಯೆ ಹೀಗಿದ್ದರೆ – DL 2 C AD 1234 — DL ದೆಹಲಿಯನ್ನು ಸೂಚಿಸಿದರೆ, 2 ಪೂರ್ವ ದೆಹಲಿ ಜಿಲ್ಲೆ, C ಅಂದರೆ ಕಾರು ಅಥವಾ S ಅಂದರೆ ದ್ವಿಚಕ್ರ ವಾಹನಗಳು ಮತ್ತು AD ಆ ವಾಹನ ನೋಂದಣಿಯ ಸರಣಿಯನ್ನು ಸೂಚಿಸುತ್ತದೆ. ಇದಾದ ಬಳಿಕ ವಾಹನದ ಸಂಖ್ಯೆ ಬರುತ್ತದೆ.
ಹೀಗಾಗಿ ದೆಹಲಿಯಲ್ಲಿ ದ್ವಿಚಕ್ರ ವಾಹನಗಳ ನೋಂದಣಿ ಸಂಖ್ಯೆಯಲ್ಲಿ ಇತ್ತೀಚಿನ ದಿನಗಳಲ್ಲಿ ‘S’ ಇರುತ್ತದೆ. ಹೀಗೆ ನೋಂದಣಿಯಾಗುತ್ತಾ ‘EX’ ಸರಣಿಯವರೆಗೂ ವಾಹನಗಳ ಸಂಖ್ಯೆ ಹಿಗ್ಗಿದೆ. ಯಾವುದೇ ಉದ್ದೇಶವಿಲ್ಲದೇ, ಹೀಗೊಂದು ಮುಜುಗರದ ಪರಿಸ್ಥಿತಿ ನಿರ್ಮಾಣವಾಗಿದ್ದು, ‘SEX’ಎಂಬ ಅಕ್ಷರಮಾಲೆ ದೆಹಲಿಯ ಕೆಲ ವಾಹನಗಳ ಸಂಖ್ಯಾಫಲಕಗಳ ಮೇಲೆ ರಾರಾಜಿಸುತ್ತಿವೆ.
ತನ್ನ ಅಪ್ಪನಿಂದ ದೀಪಾವಳಿಯ ಉಡುಗೊರೆಯಾಗಿ ಸ್ಕೂಟಿಯೊಂದನ್ನು ಪಡೆದ ಹುಡುಗಿಯೊಬ್ಬಳಿಗೆ ಇಂಥ ಸರಣಿಯಲ್ಲೇ ನೋಂದಣಿ ಸಂಖ್ಯೆ ಸಿಕ್ಕಿರುವುದು ಭಾರೀ ಮುಜುಗರಕ್ಕೆ ಕಾರಣವಾಗಿದೆ. ಇದನ್ನು ಪ್ರಶ್ನಿಸಿದ ಹುಡುಗಿಯ ತಂದೆ ಆರ್‌ಟಿಓ ಕಚೇರಿಗೆ ಅಲೆದು, ಬಳಿಕ ವಾಹನದ ಡೀಲರ್ ಬಳಿ ತೆರಳಿದರೂ ಸಹ ಯಾವುದೇ ಪ್ರಯೋಜನವಾಗಿಲ್ಲ.