ನವದೆಹಲಿ: ನಮ್ಮಲ್ಲಿ ಬಹುತೇಕ ಮಂದಿ ಮೊಬೈಲ್ ಅನ್ನು ಬಹಳ ಹೆಚ್ಚಾಗಿ ಉಪಯೋಗಿಸುತ್ತಾರೆ. ತಿಂಡಿ/ಊಟ ಮಾಡುವಾಗಿಂದ ಹಿಡಿದು ಬಸ್ ನಲ್ಲಿ ಪ್ರಯಾಣಿಸುವಾಗ, ದಾರಿಯಲ್ಲಿ ನಡೆಯುತ್ತಿರಬೇಕಾದ್ರೆ ಹೀಗೆ ಮೊಬೈಲ್ ಗೆ ಹೆಚ್ಚಾಗಿ ಅಂಟಿಕೊಂಡೇ ಇರುತ್ತಾರೆ. ಇದು ಕೆಲವೊಮ್ಮೆ ಅವರ ಜೀವನಕ್ಕೆ ಮಾರಕವಾಗಿ ಪರಿಣಮಿಸಬಹುದು. ಅಂತಹ ಒಂದು ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.
ಮೊಬೈಲ್ ನೋಡೋದ್ರಲ್ಲಿ ಮುಳುಗಿದ್ದ ವ್ಯಕ್ತಿಯೊಬ್ಬ ಮೆಟ್ರೋ ರೈಲು ಪ್ಲಾಟ್‌ಫಾರ್ಮ್‌ನಲ್ಲಿ ನಡೆಯುತ್ತಾ ಸಾಗುತ್ತಿರಬೇಕಿದ್ರೆ ಅಚಾನಕ್ ಆಗಿ ರೈಲ್ವೇ ಹಳಿಗೆ ಆಯತಪ್ಪಿ ಬಿದ್ದಿದ್ದಾನೆ. ಈ ವೇಳೆ ಆತ ಎದ್ದೇಳಲು ಕೂಡ ಹೆಣಗಾಡಿದ್ದಾನೆ. ಕೂಡಲೇ ಆತನನ್ನು ಗಮನಿಸಿದ ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆ (ಸಿಐಎಸ್ಎಫ್) ಸಿಬ್ಬಂದಿ ಅವನ ಸಹಾಯಕ್ಕೆ ಧಾವಿಸಿದ್ದಾರೆ. ಕೂಡಲೇ ಕೆಳಗಿಳಿದ ಸಿಬ್ಬಂದಿ ಮೆಟ್ರೋ ಬರುವ ಮುನ್ನ ಆತನನ್ನು ಪ್ಲಾಟ್‌ಫಾರ್ಮ್ ನತ್ತ ತಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
ಅದೃಷ್ಟವಶಾತ್, ವ್ಯಕ್ತಿಯು ಅಪಾಯದಿಂದ ಪಾರಾಗಿದ್ದಾನೆ. ವ್ಯಕ್ತಿಯನ್ನು 58 ವರ್ಷದ ಶೈಲೇಂದರ್ ಮೆಹ್ತಾ ಎಂದು ಗುರುತಿಸಲಾಗಿದ್ದು, ಸಣ್ಣ-ಪುಟ್ಟ ಗಾಯ ಹೊರತುಪಡಿಸಿ ಯಾವುದೇ ಗಂಭೀರವಾದ ಗಾಯವಾಗಿಲ್ಲ.
ರಾಷ್ಟ್ರ ರಾಜಧಾನಿ ದೆಹಲಿಯ ಈಶಾನ್ಯ ಭಾಗದಲ್ಲಿರುವ ಶಹದಾರಾ ಮೆಟ್ರೋ ನಿಲ್ದಾಣದಲ್ಲಿ ಶುಕ್ರವಾರ ಈ ಘಟನೆ ನಡೆದಿದೆ. ಸಿಐಎಸ್‌ಎಫ್ ಕ್ಯೂಆರ್‌ಟಿ ತಂಡದ ಕಾನ್‌ಸ್ಟೇಬಲ್ ರೋಥಾಶ್ ಚಂದ್ರ ಅವರು ಶೈಲೇಂದರ್ ನನ್ನು ರಕ್ಷಿಸಿದ್ದಾರೆ. ಸಿಸಿ ಕ್ಯಾಮರಾದಲ್ಲಿ ಈ ದೃಶ್ಯ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದೆ. ಭದ್ರತಾ ಸಿಬ್ಬಂದಿಯ ಕಾರ್ಯಕ್ಕೆ ನೆಟ್ಟಿಗರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ.