ಕೇಂದ್ರ ಸರ್ಕಾರ ‘ಅಗ್ನಿಪಥ್’ ಯೋಜನೆಯಡಿ ಭಾರತೀಯ ಸೇನೆಗೆ ‘ಅಗ್ನಿ ವೀರ’ರನ್ನು ನೇಮಕ ಮಾಡಿಕೊಳ್ಳುತ್ತಿದ್ದು, ಇದಕ್ಕಾಗಿ ವಾಯುಪಡೆ, ನೌಕಾಪಡೆ ಹಾಗೂ ಭೂ ಸೇನಾ ಪಡೆಗಳು ಈಗಾಗಲೇ ಪ್ರಕ್ರಿಯೆಯನ್ನು ಆರಂಭಿಸಿವೆ. ಯುವ ಜನತೆ ಸಹ ಅಗ್ನಿವೀರರಾಗಲು ಉತ್ಸಾಹದಿಂದ ಮುಂದೆ ಬರುತ್ತಿದ್ದು, ಈಗಾಗಲೇ ಲಕ್ಷಾಂತರ ಮಂದಿ ತಮ್ಮ ಹೆಸರನ್ನು ನೋಂದಾಯಿಸಿಕೊಂಡಿದ್ದಾರೆ.
ಇದರ ಮಧ್ಯೆ ಅಗ್ನಿವೀರರಾಗಲು ಬಯಸಿದ್ದವರಿಗೆ ಮತ್ತೊಂದು ಮಹತ್ವದ ಮಾಹಿತಿ ಇಲ್ಲಿದೆ. ಈ ಮೊದಲು ಅಗ್ನಿವೀರರು 4 ವರ್ಷದ ಅವಧಿಯಲ್ಲಿ ಗಾಯಾಳುಗಳಾದರೆ ಅವರಿಗೆ ಉಳಿದ ತಿಂಗಳ ಪೂರ್ಣ ವೇತನದೊಂದಿಗೆ ಸೇವಾ ನಿಧಿ ಯೋಜನೆಯಡಿ 11.75 ಲಕ್ಷ ರೂಪಾಯಿಗಳನ್ನು ನೀಡಲಾಗುತ್ತಿತ್ತು.
ಇದೀಗ ಅಗ್ನಿವೀರರು ತರಬೇತಿ ವೇಳೆ ಗಾಯಗೊಂಡರೆ ಅಥವಾ ಅಂಗವೈಕಲ್ಯ ಹೊಂದಿದರೆ ಅವರಿಗೆ ಹೆಚ್ಚಿನ ನೆರವು ನೀಡುವ ಕುರಿತು ರಕ್ಷಣಾ ಸಚಿವಾಲಯ ಚಿಂತನೆ ನಡೆಸುತ್ತಿದೆ ಎಂದು ತಿಳಿದುಬಂದಿದೆ. ‘ಅಗ್ನಿಪಥ್’ ಯೋಜನೆ ಅಡಿ ಅಗ್ನಿವೀರರಿಗೆ ನಾಲ್ಕು ವರ್ಷದ ಅವಧಿಯಲ್ಲಿ ಆರು ತಿಂಗಳ ಕನಿಷ್ಠ ತರಬೇತಿ ಅವಧಿಯನ್ನು ನಿಗದಿಪಡಿಸಲಾಗಿದೆ. ಇದೀಗ ತರಬೇತಿ ಅವಧಿಯಲ್ಲಿ ಗಾಯಗೊಂಡವರಿಗೂ ಪರಿಹಾರ ಸಿಗುವ ಸಾಧ್ಯತೆ ಇದೆ.