ದೇವರ ಪೂಜೆಯ ವೇಳೆ ಅಗರಬತ್ತಿ, ಧೂಪವನ್ನು ಅಗತ್ಯವಾಗಿ ಬಳಸುತ್ತಾರೆ. ಧೂಪವಿಲ್ಲದೆ ಪೂಜೆ ಅಪೂರ್ಣ. ದೇವರ ಪೋಜೆ ಜೊತೆ ವಿಶೇಷ ಸಮಾರಂಭಗಳಲ್ಲಿ ಅಗರಬತ್ತಿ ಹಾಗೂ ಧೂಪದ ಬಳಕೆ ಮಾಡ್ತಾರೆ. ಪವಿತ್ರ ನದಿಗಳಿಗೆ ಹೋದಾಗ್ಲೂ ಜನರು ನೀರಿನಲ್ಲಿ ದೀಪ ತೇಲಿ ಬಿಡುವ ಜೊತೆಗೆ ಅಗರಬತ್ತಿ ಹಚ್ಚುತ್ತಾರೆ.
ಸಾಮಾನ್ಯವಾಗಿ ಅಗರಬತ್ತಿ ಹಾಗೂ ಧೂಪದ ಸುಹಾಸನೆ ಎಲ್ಲರನ್ನು ಸೆಳೆಯುತ್ತದೆ. ದೇವರ ಆರಾಧನೆಯ ಸಮಯದಲ್ಲಿ ವಾತಾವರಣ ಪರಿಮಳಯುಕ್ತವಾಗಿರಲೆಂದು ಇದ್ರ ಬಳಕೆ ಮಾಡ್ತಾರೆ. ಧೂಪದ ಸುಹಾಸನೆ, ನಕಾರಾತ್ಮಕ ಶಕ್ತಿಯನ್ನು ಓಡಿಸಿ, ಸಕಾರಾತ್ಮಕ ಶಕ್ತಿ ನೆಲೆಸಲು ನೆರವಾಗುತ್ತದೆ. ಧೂಪದ್ರವ್ಯಗಳಿಂದ ಹರಡುವ ಸುಗಂಧವು ಮನಸ್ಸಿಗೆ ಶಾಂತಿ, ನೆಮ್ಮದಿ ನೀಡುತ್ತದೆ. ವ್ಯಕ್ತಿಯ ಮನಸ್ಸಿನಲ್ಲಿ ಶುದ್ಧತೆ ಮತ್ತು ಶಾಂತಿಯನ್ನು ತರುವ ಕಾರಣ ಅನೇಕ ಬಗೆಯ ಗಿಡಮೂಲಿಕೆಗಳು ಮತ್ತು ಹೂವುಗಳ ಸಾರಗಳನ್ನು ಹೊಂದಿರುವ ಧೂಪದ್ರವ್ಯವನ್ನು ಬಳಕೆ ಮಾಡಲಾಗುತ್ತದೆ.
ಅತ್ಯಂತ ಮುಖ್ಯವಾದ ವಿಷಯವೆಂದರೆ ದೇವಾನುದೇವತೆಗಳು ಧೂಪ ಬೆಳಗಿದ್ರೆ ಸಂತೋಷಗೊಳ್ಳುತ್ತವೆ ಎಂಬ ನಂಬಿಕೆಯಿದೆ. ಬೇರೆ ಬೇರೆ ದೇವರಿಗೆ ಬೇರೆ ಬೇರೆ ಸುಗಂಧ ಇಷ್ಟವಾಗುತ್ತದೆ. ಲಕ್ಷ್ಮಿ ದೇವಿ ಗುಲಾಬಿಯ ಪರಿಮಳವನ್ನು ಪ್ರೀತಿಸುತ್ತಾಳೆ. ದೇವರಿಗೆ ಪ್ರಿಯವಾದ ಅಗರಬತ್ತಿ ಅಥವಾ ಧೂಪ ಹಚ್ಚುವುದ್ರಿಂದ ದೇವರು ಬೇಗ ಭಕ್ತರಿಗೆ ಒಲಿಯುತ್ತಾರೆ. ಪೂಜೆಯಿಂದ ತೃಪ್ತರಾಗ್ತಾರೆಂಬ ನಂಬಿಕೆಯಿದೆ.