ಹಾವೇರಿಯಲ್ಲಿ ನಡೆಯುತ್ತಿರುವ 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಇಂದು ತೆರೆ ಬೀಳಲಿದ್ದು, ಸಂಜೆ 5:00 ಗಂಟೆಯಿಂದ ಶ್ರೀ ಅಜ್ಜಯ್ಯ ದೇವಸ್ಥಾನ ಎದುರಿನ ಸಮ್ಮೇಳನ ಸಭಾಂಗಣದಲ್ಲಿ ಸಮಾರೋಪ ಸಮಾರಂಭ ನಡೆಯಲಿದೆ.
ಮೂರು ದಿನಗಳ ಕಾಲ ನಡೆಯುತ್ತಿರುವ ಈ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಎರಡು ದಿನಗಳ ಅವಧಿಯಲ್ಲಿ ರಾಜ್ಯದಾದ್ಯಂತ ಈಗಾಗಲೇ ಲಕ್ಷಾಂತರ ಮಂದಿ ಭಾಗವಹಿಸಿದ್ದು, ಮೂರನೇ ದಿನವಾದ ಇಂದೂ ಕೂಡ ಬಾರಿ ಸಂಖ್ಯೆಯಲ್ಲಿ ಜನ ಆಗಮಿಸುವ ನಿರೀಕ್ಷೆ ಇದೆ.
ಸಂಜೆ ನಡೆಯಲಿರುವ ಸಮಾರಂಭದಲ್ಲಿ ವಿಶ್ರಾಂತ ಕುಲಪತಿ ಡಾ. ಬಿ.ಎ. ವಿವೇಕ್ ರೈ ಸಮಾರೋಪ ಭಾಷಣ ಮಾಡಲಿದ್ದು, ಸಮ್ಮೇಳನಾಧ್ಯಕ್ಷ ಡಾ. ದೊಡ್ಡರಂಗೇಗೌಡ ಮಾತನಾಡಲಿದ್ದಾರೆ. ಅಧ್ಯಕ್ಷತೆಯನ್ನು ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಡಾ. ಮಹೇಶ್ ಜೋಷಿ ವಹಿಸಲಿದ್ದಾರೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಉಪಸ್ಥಿತರಿರಲಿದ್ದಾರೆ.