ಈ ಹಿಂದೆ ನಾನಾ ಕಾರಣಗಳಿಂದ ಮುಂದೂಡಲ್ಪಟ್ಟಿದ್ದ 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವನ್ನು 2023ರ ಜನವರಿ 6, 7 ಹಾಗೂ 8ರಂದು ಹಾವೇರಿಯಲ್ಲಿ ನಡೆಸಲು ತೀರ್ಮಾನ ಕೈಗೊಳ್ಳಲಾಗಿದೆ. ಬುಧವಾರದಂದು ವಿಧಾನಸೌಧದಲ್ಲಿ ನಡೆದ ಸಮ್ಮೇಳನ ಪೂರ್ವಭಾವಿ ಸಭೆಯಲ್ಲಿ ಈ ಕುರಿತು ನಿರ್ಧರಿಸಲಾಗಿದೆ.
ಸಭೆಯಲ್ಲಿ ಡಿಸೆಂಬರ್ 23, 24 ಹಾಗೂ 25ರಂದು ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆಸಲು ಚರ್ಚೆ ನಡೆಸಿದ ವೇಳೆ ಆ ಸಂದರ್ಭದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಪೂರ್ವ ನಿಯೋಜಿತ ಜನ ಸಂಕಲ್ಪ ಯಾತ್ರೆಯಲ್ಲಿ ಪಾಲ್ಗೊಳ್ಳಬೇಕಿರುವ ಕಾರಣ ಬಳಿಕ ಮುಖ್ಯಮಂತ್ರಿಯವರನ್ನು ದೂರವಾಣಿ ಮೂಲಕ ಸಂಪರ್ಕಿಸಿ ಹೊಸ ದಿನಾಂಕವನ್ನು ಖಚಿತಪಡಿಸಿಕೊಳ್ಳಲಾಗಿದೆ.
ಈಗ ನಿಗದಿಯಾಗಿರುವ ದಿನಾಂಕಗಳನ್ನು ಯಾವುದೇ ಕಾರಣಕ್ಕೂ ಬದಲಾಯಿಸಬಾರದು ಎಂದು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ನಾಡೋಜ ಡಾ. ಮಹೇಶ ಜೋಶಿ ಸ್ಪಷ್ಟ ಮಾತುಗಳಲ್ಲಿ ಹೇಳಿದ್ದು, ಈ ಸಭೆಯಲ್ಲಿ ಹಾವೇರಿ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಂ ಹೆಬ್ಬಾರ್, ಕನ್ನಡ ಮತ್ತು ಸಂಸ್ಕೃತಿ ಖಾತೆ ಸಚಿವ ಸುನಿಲ್ ಕುಮಾರ್, ಶಾಸಕರಾದ ನೆಹರು ಓಲೆಕಾರ ಮೊದಲಾದವರು ಉಪಸ್ಥಿತರಿದ್ದರು.