ಹಳದಿ ಲೋಹ ಚಿನ್ನದ ಮೇಲೆ ಭಾರತೀಯರಿಗೆ ವಿಪರೀತ ವ್ಯಾಮೋಹ. ಇದರ ಜೊತೆಗೆ ಆಪತ್ಕಾಲದಲ್ಲೂ ಇದು ನೆರವಿಗೆ ಬರುತ್ತದೆ ಎಂಬ ಕಾರಣಕ್ಕೆ ಬಡ ಮತ್ತು ಮಧ್ಯಮ ವರ್ಗದ ಜನ ಅವಕಾಶ ಸಿಕ್ಕ ಸಂದರ್ಭದಲ್ಲಿ ಚಿನ್ನ ಖರೀದಿಗೆ ಮುಂದಾಗುತ್ತಾರೆ. ಆದರೆ ಕಳೆದ ಕೆಲವು ದಿನಗಳಿಂದ ಚಿನ್ನದ ದರ ಏರುಮುಖದಲ್ಲಿತ್ತು.
ಅಂತರರಾಷ್ಟ್ರೀಯ ಮಾರುಕಟ್ಟೆಯ ಬೆಲೆಗಳಿಗನುಗುಣವಾಗಿ ಈ ಬೆಳವಣಿಗೆ ನಡೆದಿದ್ದು, ಇದೇ ಪ್ರವೃತ್ತಿ ಮುಂದುವರೆದರೆ ಚಿನ್ನದ ಬೆಲೆ 65,000 ರೂಪಾಯಿ ತಲುಪಬಹುದು ಎಂಬುದು ಮಾರುಕಟ್ಟೆ ತಜ್ಞರ ಅಂದಾಜಾಗಿತ್ತು. ಇದರ ಮಧ್ಯೆ ಆಭರಣ ಪ್ರಿಯರಿಗೆ ಖುಷಿ ಸುದ್ದಿಯೊಂದು ಇಲ್ಲಿದೆ.
ಬುಧವಾರದಂದು ಚಿನ್ನದ ದರದಲ್ಲಿ ಏಕಾಏಕಿ ಇಳಿಕೆ ಕಂಡಿದ್ದು, 10 ಗ್ರಾಂ ಗೆ 510 ರೂಪಾಯಿ ಇಳಿಕೆ ಕಾಣುವ ಮೂಲಕ 59,940 ರೂಪಾಯಿಗಳಿಗೆ ಮಾರಾಟವಾಗಿದೆ. ಜಾಗತಿಕ ಮಾರುಕಟ್ಟೆಯಲ್ಲೂ ಚಿನ್ನದ ದರ ಇಳಿಕೆಯಾಗಿರುವುದೇ ಇದಕ್ಕೆ ಕಾರಣ ಎಂದು ಹೇಳಲಾಗಿದೆ. ಇನ್ನು ಬೆಳ್ಳಿ ಬೆಲೆಯಲ್ಲೂ 920 ರೂಪಾಯಿಗಳಷ್ಟು ಕಡಿಮೆಯಾಗಿದ್ದು, ಕೆಜಿ ಬೆಳ್ಳಿ ಬೆಲೆ 74,680 ರೂಪಾಯಿಗಳಾಗಿದೆ. ಏಪ್ರಿಲ್ 23 ರಂದು ಅಕ್ಷಯ ತೃತೀಯವಿದ್ದು ಈ ಸಂದರ್ಭದಲ್ಲಿಯೇ ಚಿನ್ನ – ಬೆಳ್ಳಿ ಬೆಲೆ ಇಳಿಕೆಯಾಗಿರುವುದು ಖರೀದಿದಾರರ ಮೊಗದಲ್ಲಿ ಮಂದಹಾಸ ಮೂಡಿಸಿದೆ.