ವೈಶಾಖ ಮಾಸದ ಶುಕ್ಲ ಪಕ್ಷದ ತೃತೀಯದಂದು ಭಗವಂತ ವಿಷ್ಣುವಿನ ಅವತಾರವಾಗಿತ್ತು. ಹಾಗಾಗಿ ಅಂದು ಅಕ್ಷಯ ತೃತೀಯವನ್ನು ಆಚರಿಸಲಾಗುತ್ತದೆ. ಹಿಂದೂ ಧರ್ಮದಲ್ಲಿ ಮದುವೆ, ಉತ್ಸವ ಸೇರಿದಂತೆ ಶುಭ ಕೆಲಸಕ್ಕೆ ಇದು ಅತ್ಯಂತ ಒಳ್ಳೆಯ ದಿನವೆಂದು ಭಾವಿಸಲಾಗಿದೆ.
ಈ ಬಾರಿ ಏ. 23ರಂದು ಅಕ್ಷಯ ತೃತೀಯ ಬಂದಿದೆ. ವಿವಾಹ, ನಾಮಕರಣ ಸೇರಿದಂತೆ ಯಾವುದೇ ಶುಭ ಕೆಲಸವನ್ನು ಮುಹೂರ್ತ ನೋಡದೆ ಮಾಡಬಹುದಾಗಿದೆ. ಅಕ್ಷಯ ತೃತೀಯವನ್ನು ಹಬ್ಬದ ರೀತಿಯಲ್ಲಿ ಆಚರಿಸಲಾಗುತ್ತದೆ. ತೀರ್ಥ ಸ್ನಾನ, ಜಪ, ದಾನ, ತರ್ಪಣ ಸೇರಿದಂತೆ ಪುಣ್ಯ ಕೆಲಸಗಳನ್ನು ಮಾಡಲಾಗುತ್ತದೆ. ಜಪ, ಪೂಜೆ, ಯಜ್ಞ, ಹವನಗಳನ್ನು ಮಾಡುವುದರಿಂದ ಸಿಗುವ ಫಲ ಹೆಚ್ಚೆಂದು ಹೇಳಲಾಗುತ್ತದೆ.
ಲಕ್ಷ್ಮಿ, ವಿಷ್ಣು, ಕುಬೇರನ ಪೂಜೆ ಮಾಡುವುದು ಶ್ರೇಷ್ಠವೆಂದು ನಂಬಲಾಗಿದೆ. ಈ ದಿನ ಕೈಲಾದಷ್ಟು ಧರ್ಮ-ಕರ್ಮಗಳನ್ನು ಮಾಡಬೇಕು. ಬ್ರಾಹ್ಮಣರಿಗೆ ದಕ್ಷಿಣೆ ನೀಡಬೇಕು. ಕಬ್ಬಿನ ರಸದ ಜೊತೆ ಹಾಲು, ಅಕ್ಕಿ, ಮೊಸರಿನಿಂದ ಮಾಡಿದ ಯಾವುದಾದ್ರೂ ಪದಾರ್ಥವನ್ನು ದೇವರಿಗೆ ಅರ್ಪಣೆ ಮಾಡಬೇಕು.
ಯಾವ ವ್ಯಕ್ತಿ ಈ ದಿನ ಆಲಸ್ಯ ಬಿಟ್ಟು ಕಮಲದ ಹೂವನ್ನು ಹಾಕಿ ದೇವರ ಪೂಜೆ ಮಾಡುತ್ತಾನೋ ಆತನಿಗೆ ಸಂಸಾರ ಸುಖ ಪ್ರಾಪ್ತಿಯಾಗುತ್ತದೆ. ಯಾವ ವ್ಯಕ್ತಿ ಈ ದಿನ ಗಂಗಾ ಸ್ನಾನ ಮಾಡುತ್ತಾನೋ ಆತನ ಪಾಪವೆಲ್ಲ ತೊಳೆದು ಹೋಗುತ್ತದೆ. ಮಾಡುವ ಎಲ್ಲ ಕೆಲಸದಲ್ಲಿಯೂ ಯಶ ಸಿಗುತ್ತದೆ.
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ದಾನಕ್ಕೆ ಮಹತ್ವದ ಸ್ಥಾನವಿದೆ. ಯಾವ ದಿನ ದಾನ ಮಾಡಿದ್ರೂ ಶುಭ ಫಲ ಸಿಗಲಿದೆ. ಆದ್ರೆ ಅಕ್ಷಯ ತೃತೀಯದಂದು ಮಾಡುವ ದಾನಕ್ಕೆ ಮತ್ತಷ್ಟು ಮಹತ್ವವಿದೆ. ಅಕ್ಷಯ ತೃತೀಯದಂದು ಕಾಕಂಬಿಯನ್ನು ದಾನವಾಗಿ ನೀಡುವುದು ಶ್ರೇಷ್ಠ.
ಯಾರಿಗೂ ಕೆಟ್ಟ ಶಬ್ಧಗಳಿಂದ ನಿಂದನೆ ಮಾಡಬಾರದು. ಜಗಳ, ಗಲಾಟೆಯಿಂದ ದೂರವಿರುವುದು ಒಳ್ಳೆಯದು. ಲಕ್ಷ್ಮಿ ಪ್ರತೀಕವಾದ ಬಂಗಾರ ಖರೀದಿಗೆ ಅಕ್ಷಯ ತೃತೀಯದಂದು ಮಹತ್ವದ ಸ್ಥಾನವಿದೆ. ಒಳ್ಳೆಯ ಮುಹೂರ್ತ ನೋಡಿ ಬಂಗಾರ, ಬೆಳ್ಳಿಯ ಆಭರಣ ಖರೀದಿ ಮಾಡಿದ್ರೆ ಬಹಳ ಒಳ್ಳೆಯದು. ಅಕ್ಷಯ ತೃತೀಯದಂದು ವಿಧಿ-ವಿಧಾನದ ಮೂಲಕ ಪೂಜೆ ಮಾಡಬೇಕು. ಆಗ ಮಾತ್ರ ಭಗವಂತನ ಕೃಪೆಗೆ ಪಾತ್ರರಾಗಲು ಸಾಧ್ಯ.