ಅಕ್ಷಯ ತೃತೀಯದಂದು ಚಿನ್ನ, ಬೆಳ್ಳಿ ಮತ್ತು ಇತರ ಲೋಹಗಳನ್ನು ಖರೀದಿಸಿದರೆ ಶುಭವಾಗುತ್ತದೆ ಅನ್ನೋ ನಂಬಿಕೆ ಇದೆ. ಹಾಗಾಗಿ ಅಕ್ಷಯ ತೃತೀಯದಂದು ಚಿನ್ನಕ್ಕೆ ಸಿಕ್ಕಾಪಟ್ಟೆ ಡಿಮ್ಯಾಂಡ್. ಜ್ಯುವೆಲ್ಲರಿ ಮಳಿಗೆಗಳೆಲ್ಲ ಗ್ರಾಹಕರಿಂದ ತುಂಬಿ ತುಳುಕುತ್ತಿರುತ್ತವೆ. ಆ ದಿನ ಟೋಕನ್ ಖರೀದಿಗಾಗಿ ಬುಲಿಯನ್ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಮೇಲೆ ವಿಶೇಷ ಗಮನ ನೀಡಲಾಗುತ್ತದೆ.
ಅಕ್ಷಯ ತೃತೀಯ ಮಂಗಳಕರ ದಿನ. ಅಂದು ಬಂಗಾರ ಖರೀದಿ ಮಾಡಿದ್ರೆ ಯಾವಾಗಲೂ ಸಮೃದ್ಧಿಯಿರುತ್ತದೆ ಅನ್ನೋದು ಜನರ ನಂಬಿಕೆ. ಅದರಲ್ಲೂ ಭಾರತೀಯರಿಗೆ ಬಂಗಾರದ ಮೇಲೆ ಮೋಹ ಜಾಸ್ತಿ. ಇದೊಂದು ಸುರಕ್ಷಿತ ಹೂಡಿಕೆ ಎಂಬ ಭಾವನೆಯೂ ಇದೆ. ಮದುವೆ ಸೇರಿದಂತೆ ಕೆಲವೊಂದು ಶುಭ ಸಮಾರಂಭಗಳಲ್ಲಿ ಚಿನ್ನ ಖರೀದಿಸುವುದು ಇಲ್ಲಿನ ಸಂಪ್ರದಾಯ.
ಈ ರೀತಿ ಭೌತಿಕ ಚಿನ್ನದ ಮಾರಾಟದ ಮೇಲೆ ನೀವು ಎಷ್ಟು ತೆರಿಗೆ ಪಾವತಿಸಬೇಕಾಗುತ್ತದೆ ಅನ್ನೋದು ನಿಮಗೆ ತಿಳಿದಿದೆಯೇ? ಹಳದಿ ಲೋಹದ ವಿಶ್ವದ ಎರಡನೇ ಅತಿದೊಡ್ಡ ಗ್ರಾಹಕ ಭಾರತವಾಗಿದೆ. ಆದಾಗ್ಯೂ ಹೆಚ್ಚಿನ ಚಿಲ್ಲರೆ ಖರೀದಿಗಳನ್ನು ಆಫ್‌ಲೈನ್‌ನಲ್ಲಿ ಮಾಡಲಾಗುತ್ತದೆ. ಜನರು ಚಿನ್ನದ ಗಟ್ಟಿಗಳು, ನಾಣ್ಯಗಳು ಹಾಗೂ ಜನಪ್ರಿಯವಾದ ಕೆಲವೊಂದು ಆಭರಣಗಳನ್ನೇ ಹೆಚ್ಚಾಗಿ ಖರೀದಿಸುತ್ತಾರೆ.
ಈ ಬಂಗಾರವನ್ನು 36 ತಿಂಗಳು ಅಥವಾ 3 ವರ್ಷಗಳ ನಂತರ ಮಾರಾಟ ಮಾಡಿದರೆ ನೀವು ಶೇ.20ರಷ್ಟು ಬಂಡವಾಳ ಲಾಭದ ತೆರಿಗೆಯನ್ನು ಪಾವತಿಸಬೇಕಾಗುತ್ತದೆ. ಹೆಚ್ಚುವರಿಯಾಗಿ ನಿಮಗೆ ತೆರಿಗೆ ಮೊತ್ತದ ಮೇಲೆ ಶೇಕಡಾ 4ರಷ್ಟು ಸೆಸ್ ವಿಧಿಸಲಾಗುತ್ತದೆ. ಮೇಲೆ ತಿಳಿಸಿದ ಅವಧಿಗಿಂತ ಮೊದಲು ನೀವು ಅದನ್ನು ಮಾರಾಟ ಮಾಡಿದರೆ, ಚಿನ್ನದ ಮಾರಾಟದ ಲಾಭವನ್ನು ನಿಮ್ಮ ಒಟ್ಟು ಆದಾಯ ತೆರಿಗೆಗೆ ಸೇರಿಸಲಾಗುತ್ತದೆ. ನಿಮ್ಮ ಆದಾಯ ತೆರಿಗೆ ಸ್ಲ್ಯಾಬ್‌ನ ಪ್ರಕಾರ ನೀವು ತೆರಿಗೆಯನ್ನು ಪಾವತಿಸಬೇಕಾಗುತ್ತದೆ.
ಈ ಬಾರಿ ಮೇ 3ರಂದು ಅಕ್ಷಯ ತೃತೀಯ ಬಂದಿದೆ. ಕಳೆದ ಬಾರಿ ಕೋವಿಡ್ ಎರಡನೇ ಅಲೆಯ ಆರ್ಭಟದಿಂದಾಗಿ ಬಹಳಷ್ಟು ಕಡೆಗಳಲ್ಲಿ ಭಾಗಶಃ ಲಾಕ್‌ಡೌನ್ ಇತ್ತು. ಹಾಗಾಗಿ ಅಕ್ಷಯ ತೃತೀಯದಂದು ಚಿನ್ನ ಖರೀದಿ ಕೊಂಚ ನೀರಸವಾಗಿತ್ತು. ಈ ಬಾರಿ ಕೋವಿಡ್ ಅಲೆ ಕೊಂಚ ತಗ್ಗಿರುವುದರಿಂದ ಗ್ರಾಹಕರು ಚಿನ್ನದ ಮಳಿಗೆಗಳಿಗೆ ಮುಗಿಬೀಳುವ ಸಾಧ್ಯತೆ ಇದೆ.