ಖ್ಯಾತ ಉದ್ಯಮಿ ಸೈರಸ್ ಮಿಸ್ತ್ರಿ ಭೀಕರ ಕಾರು ಅಪಘಾತದಲ್ಲಿ ಸಾವನ್ನಪ್ಪಿದ ಬಳಿಕ ಸೀಟ್ ಬೆಲ್ಟ್ ಧರಿಸುವ ಮಹತ್ವದ ಕುರಿತು ಚರ್ಚೆ ನಡೆಯುತ್ತಿದೆ. ಕೇಂದ್ರ ಸರ್ಕಾರವೂ ಸಹ ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುತ್ತಿದ್ದು, ಹಿಂಬದಿ ಸೀಟಿನಲ್ಲಿ ಇರುವವರಿಗೂ ಸೀಟ್ ಬೆಲ್ಟ್ ಕಡ್ಡಾಯದ ಜೊತೆಗೆ ಸೀಟ್ ಬೆಲ್ಟ್ ಅಲಾರಾಂ ನಿಲ್ಲಿಸುವ ಸಾಧನಗಳ ಮಾರಾಟಕ್ಕೆ ಬ್ರೇಕ್ ಹಾಕಲು ನಿರ್ಧರಿಸಿದೆ.
ಇದರ ಮಧ್ಯೆ ರಸ್ತೆ ಸುರಕ್ಷತಾ ಸಂಚಾರ ಕುರಿತು ಹಾಗೂ ಸೀಟ್ ಬೆಲ್ಟ್ ಧರಿಸುವ ಮಹತ್ವವನ್ನು ಸಾರುವುದಕ್ಕೆ ಸಂಬಂಧಿಸಿದ ಜಾಹೀರಾತಿನಲ್ಲಿ ನಟ ಅಕ್ಷಯ್ ಕುಮಾರ್ ಕಾಣಿಸಿಕೊಂಡಿದ್ದು, ಆದರೆ ಈ ಜಾಹೀರಾತು ಈಗ ವಿವಾದಕ್ಕೆ ಕಾರಣವಾಗಿದ್ದು ವರದಕ್ಷಿಣೆಯನ್ನು ಪ್ರಚಾರ ಮಾಡುತ್ತಿದೆ ಎಂಬ ಆರೋಪಕ್ಕೆ ಗುರಿಯಾಗಿದೆ.
ಜಾಹೀರಾತಿನಲ್ಲಿ ವಧು ತನ್ನ ಗಂಡನ ಮನೆಗೆ ಕಾರಿನಲ್ಲಿ ಹೋಗುವಾಗ ಅಳುತ್ತಿರುವ ದೃಶ್ಯ ಕಾಣಿಸಿಕೊಳ್ಳುತ್ತದೆ. ಈ ಸಂದರ್ಭದಲ್ಲಿ ಬರುವ ಪೊಲೀಸ್ ಪಾತ್ರಧಾರಿ ಅಕ್ಷಯ್ ಕುಮಾರ್, ನಿಮ್ಮ ಮಗಳ ರಕ್ಷಣೆಗಾಗಿ ಎರಡು ಏರ್ ಬ್ಯಾಗ್ ಇರುವ ಕಾರಿನ ಬದಲು ಆರು ಏರ್ ಬ್ಯಾಗ್ ಇರುವ ಕಾರನ್ನು ನೀಡಿ ಎಂದು ವಧುವಿನ ತಂದೆಗೆ ಹೇಳುತ್ತಾರೆ.
ನಂತರದ ದೃಶ್ಯದಲ್ಲಿ ಆರು ಏರ್ ಬ್ಯಾಗ್ ಇರುವ ಕಾರಿನಲ್ಲಿ ದಂಪತಿ ಖುಷಿಯಾಗಿ ತೆರಳುತ್ತಿದ್ದು, ಆದರೆ ವಧುವಿನ ತಂದೆಗೆ ಕಾರನ್ನು ನೀಡಲು ಹೇಳುವ ಮೂಲಕ ವರದಕ್ಷಿಣೆಗೆ ಪ್ರಚಾರ ಸಿಕ್ಕಂತಾಗಿದೆ ಎಂದು ಹಲವರು ಆರೋಪ ಮಾಡಿದ್ದಾರೆ.