ಕಾರವಾರ: ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದಕ್ಕೆ ಆಕ್ರೋಶಗೊಂಡ ಮಹಿಳೆಯರು ಮನೆಗೆ ನುಗ್ಗಿ ಮದ್ಯವನ್ನೆಲ್ಲ ನಾಶ ಮಾಡಿರುವ ಘಟನೆ ನಡೆದಿದೆ.
ತಾಲೂಕಿನ ಕಣ್ಣಿಗೇರಿ ಹತ್ತಿರದ ಕೋಳಿಕೇರಿಯ ದೇಶಪಾಂಡೆ ನಗರದಲ್ಲಿ ಈ ಘಟನೆ ನಡೆದಿದೆ. ಈ ಗ್ರಾಮದಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿರುವುದು ಹೆಚ್ಚಾಗಿತ್ತು. ಈ ಕುರಿತು ಬೇಸರ ವ್ಯಕ್ತಪಡಿಸಿದ್ದ ಮಹಿಳೆಯರು ಹಲವು ಬಾರಿ ಅಕ್ರಮ ಮದ್ಯ ಮಾರಾಟ ಮಾಡದಂತೆ ಮನವಿ ಮಾಡಿದ್ದರು. ಅಲ್ಲದೇ, ಈ ಕುರಿತು ಅಬಕಾರಿ ಇಲಾಖೆ ಹಾಗೂ ಪೊಲೀಸರಿಗೆ ದೂರು ನೀಡಿದ್ದರು.
ಆದರೆ, ಅಧಿಕಾರಿಗಳು ಮಾತ್ರ ಮಹಿಳೆಯರ ಮನವಿ ಪುರಸ್ಕರಿಸದೆ, ನಿರ್ಲಕ್ಷ್ಯ ವಹಿಸಿದ್ದರು. ಇದರಿಂದ ಆಕ್ರೋಶಗೊಂಡ ಮಹಿಳೆಯರು, ಅಕ್ರಮವಾಗಿ ಮಾರಾಟ ಮಾಡುತ್ತಿದ್ದವರ ಮನೆಗೆ ನುಗ್ಗಿ ಮದ್ಯವನ್ನು ಹುಡುಕಾಡಿ ನಾಶ ಮಾಡಿದ್ದಾರೆ.
ಸ್ಥಳೀಯ ಮಹಿಳೆಯರು ಹಾಗೂ ಮಂಜುನಾಥ ಪ್ರಗತಿ ಬಂಧು ಸಂಘದ ಸದಸ್ಯರೆಲ್ಲ ಸೇರಿಕೊಂಡು ಅಕ್ರಮ ಮದ್ಯ ನಾಶ ಮಾಡುವುದರೊಂದಿಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.