ಶಿವಮೊಗ್ಗ: ಅಕ್ರಮವೆಸಗಿದ ನ್ಯಾಯಬೆಲೆ ಅಂಗಡಿಗಳನ್ನು ರದ್ದುಪಡಿಸಬೇಕು. ಕರ್ತವ್ಯಲೋಪವೆಸಗಿದ್ದ ಅಧಿಕಾರಿಗಳ ಅಮಾನತು ಮಾಡಬೇಕೆಂದು ಆಗ್ರಹಿಸಿ ಜನತಾದಳ ಸಂಯುಕ್ತ(ಜೆಡಿಯು) ಕಾರ್ಯಕರ್ತರು ಮತ್ತು ವಿವಿಧ ಸಂಘಟನೆಗಳ ಪ್ರಮುಖರು ಇಂದು ಜಿಲ್ಲಾಧಿಕಾರಿ ಕಚೇರಿ ಎದುರು ಅನಿರ್ಧಿಷ್ಟಾವಧಿ ಧರಣಿ ನಡೆಸಿದ್ದಾರೆ.
ಭದ್ರಾವತಿ ನಗರ ಮತ್ತು ಗ್ರಾಮಾಂತರ ಭಾಗಗಳಲ್ಲಿ ನ್ಯಾಯಬೆಲೆ ಅಂಗಡಿಗಳು ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ. ಸಾಕಷ್ಟು ಭ್ರಷ್ಟಾಚಾರ ನಡೆಸುತ್ತಿದ್ದಾರೆ. ಪಡಿತರ ಧಾನ್ಯಗಳನ್ನು ಅಕ್ರಮವಾಗಿ ಮಾರಾಟ ಮಾಡುತ್ತಿದ್ದಾರೆ. ಈ ಎಲ್ಲಾ ಭ್ರಷ್ಟಾಚಾರಗಳಿಗೆ ಆಹಾರ ಇಲಾಖೆ ಅಧಿಕಾರಿಗಳು ಕೂಡ ಶಾಮೀಲಾಗಿದ್ದಾರೆ. ಮುಖ್ಯವಾಗಿ ಅಧಿಕಾರಿಗಳಾದ ಜಾನಕಿ ಹಾಗೂ ಗಾಯತ್ರಿ ಅವರು ನ್ಯಾಯಬೆಲೆ ಅಂಗಡಿ ಹಾಗೂ ಗೋದಾಮುಗಳಲ್ಲಿ ನಡೆಯುತ್ತಿರುವ ಅವ್ಯವಹಾರಗಳಿಗೆ ಕಾರಣರಾಗಿದ್ದಾರೆ. ಈ ಇಬ್ಬರು ಅಧಿಕಾರಿಗಳನ್ನು ಅಮಾನತು ಮಾಡಬೇಕೆಂದು ಧರಣಿ ನಿರತರು ಆಗ್ರಹಿಸಿದ್ದಾರೆ.
ಹಲವು ಕಡೆ ಅಂಗಡಿ ನಡೆಸಲು ಸರ್ಕಾರದ ಆದೇಶವೇ ಇರುವುದಿಲ್ಲ. ತೂಕದಲ್ಲಿ ಕಡಿಮೆ ಇರುತ್ತದೆ. ಗೋದಾಮುಗಳಲ್ಲಿ ಸಿಸಿಟಿವಿಗಳೇ ಇಲ್ಲ. ಸುಳ್ಳು ಮಾಹಿತಿ ನೀಡಲಾಗುತ್ತಿದೆ. ನಕಲಿ ರೇಷನ್ ಕಾರ್ಡ್ ಗಳಿವೆ. ಸರಿಯಾದ ಸಮಯಕ್ಕೆ ಬಾಗಿಲು ತೆಗೆಯುವುದಿಲ್ಲ. ಹೀಗಿದ್ದರೂ ಅಧಿಕಾರಿಗಳು ಕೂಡ ಸುಮ್ಮನಿದ್ದಾರೆ ಎಂದು ಆರೋಪಿಸಿದರು.
ಇತ್ತೀಚೆಗೆ ನ್ಯಾಯಬೆಲೆ ಅಂಗಡಿಗಳ ವಿರುದ್ಧ ಹೋರಾಟ ನಡೆಸುತ್ತಿದ್ದ ವಿಟ್ಲ ಗ್ರಾಮದ ವೀರಾಚಾರಿ ಎಂಬುವವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇವರ ಆತ್ಮಹತ್ಯೆಗೆ ಆಹಾರ ಇಲಾಖೆಗಳ ಅಧಿಕಾರಿಗಳೇ ಕಾರಣ. ಅವ್ಯವಹಾರಕ್ಕೆ ಸಂಬಂಧಿಸಿದಂತೆ ಹಲವು ಬಾರಿ ಪ್ರತಿಭಟನೆ ನಡೆಸಿದ್ದರೂ ಪ್ರಯೋಜನವಾಗಿಲ್ಲ. ಹಾಗಾಗಿ ಅನಿರ್ಧಿಷ್ಟಾವಧಿ ಧರಣಿ ಕೈಗೊಳ್ಳಲಾಗಿದೆ ಎಂದರು.