ಬೆಂಗಳೂರು: ಬಿಡಿಎಗೆ ಸೇರಿದ್ದ ಸುಮಾರು 30 ಕೋಟಿ ರೂಪಾಯಿ ಮೌಲ್ಯದ ಆಸ್ತಿಯನ್ನು ಅಧಿಕಾರಿಗಳು ಇಂದು ವಶಕ್ಕೆ ಪಡೆದಿದ್ದಾರೆ.
ನಗರದಲ್ಲಿನ ಆರ್.ಎಂ.ವಿ 2ನೇ ಹಂತದಲ್ಲಿ ಬಿಡಿಎಗೆ ಸೇರಿದ್ದ ಆಸ್ತಿಯನ್ನು ಎನ್ ಟಿ ಐ ಸೊಸೈಟಿಯವರು ಅಕ್ರಮವಾಗಿ ಒತ್ತುವರಿ ಮಾಡಿಕೊಂಡಿದ್ದರು.
ಹೀಗಾಗಿ ಈ ಜಾಗವನ್ನು ತೆರವುಗೊಳಿಸುವಂತೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದಿಂದ ಹಲವು ಬಾರಿ ಸೂಚನೆ ನೀಡಲಾಗಿತ್ತು. ಆದರೂ, ಈ ಒತ್ತುವರಿ ಮಾಡಿಕೊಂಡವರು ಜಾಗ ಬಿಟ್ಟು ಕದಲಿರಲಿಲ್ಲ. ಹೀಗಾಗಿ ಇಂದು ಬಿಡಿಎ ಅಧಿಕಾರಿಗಳು ದಾಳಿ ನಡೆಸಿ ಜಾಗವನ್ನು ವಶಪಡಿಸಿಕೊಂಡಿದ್ದಾರೆ.
ನಾಗಶೆಟ್ಟಿಹಳ್ಳಿಯಲ್ಲಿನ ಬಿಡಿಎ ಅಧೀನದ 32 ಗುಂಟೆ ಜಾಗವನ್ನು ಸೊಸೈಟಿಯವರು ಒತ್ತುವರಿ ಮಾಡಿಕೊಂಡು ಶೆಡ್ ಗಳನ್ನು ನಿರ್ಮಾಣ ಮಾಡಿದ್ದರು. ಯಾವುದೇ ಸೂಚನೆಗೂ ಸ್ಪಂದಿಸದ ಹಿನ್ನೆಲೆಯಲ್ಲಿ ಇಂದು ಬೆಳಿಗ್ಗೆ ಅಧಿಕಾರಿಗಳು ದಾಳಿ ಮಾಡಿ, ಶೆಡ್ ಗಳನ್ನು ಕಿತ್ತು ಹಾಕಿದ್ದಾರೆ.
ದಾಳಿಯಲ್ಲಿ ಬಿಡಿಎ ಕಾರ್ಯಪಾಲಕ ಅಭಿಯಂತರ ಕುಮಾರ್, ಪೊಲೀಸ್ ಅಧಿಕಾರಿಗಳಾದ ಭಾಸ್ಕರ್ ಮತ್ತು ರವಿಕುಮಾರ್ ನೇತೃತ್ವದ ಸಿಬ್ಬಂದಿ ಇದ್ದರು. ಜಾಗವನ್ನು ವಶಪಡಿಸಿಕೊಂಡ ನಂತರ ಕಾಂಪೌಂಡ್ ನಿರ್ಮಿಸಿ, ಫಲಕ ಹಾಕಲಾಗಿದೆ.