ಒಂದು ಬದಿಯಲ್ಲಿ ಮಸೀದಿ, ಇನ್ನೊಂದು ಬದಿಯಲ್ಲಿ ದೇವಸ್ಥಾನ- ಬಾಂಗ್ಲಾದೇಶದ ನರೈಲ್‌ನ ಮಹಿಷ್ಖೋಲಾ ಪ್ರದೇಶದಲ್ಲಿರುವ ಚಿತ್ರಾ ನದಿಯ ದಡದಲ್ಲಿ ಧಾರ್ಮಿಕ ಸಾಮರಸ್ಯದ ಪರಿಪೂರ್ಣ ಚಿತ್ರಣವೇ ಸೃಷ್ಟಿಯಾಗಿದೆ. ಹಿಂದೂಗಳು ಮತ್ತು ಮುಸ್ಲಿಮರು ಪ್ರತಿದಿನ ಪ್ರಾರ್ಥನೆ ಸಲ್ಲಿಸುವ ಸ್ಥಳಗಳು ಅಕ್ಕಪಕ್ಕದಲ್ಲೇ ಇವೆ.
ವಿಶೇಷ ಅಂದ್ರೆ ಮಹಿಷ್ಖೋಲದ ನಿವಾಸಿಗಳು ಜಾತಿ, ಧರ್ಮವೆಂಬ ಬೇಧವಿಲ್ಲದೆ ಎಲ್ಲರೂ ಒಟ್ಟಾಗಿ ದುರ್ಗಾ ಪೂಜೆಯನ್ನು ಆಚರಿಸುತ್ತಾರೆ. ಈ ವರ್ಷ ಕೂಡ ಅದೇ ರೀತಿ ಒಂದೆಡೆ ಸೇರಿದ್ದಾರೆ. 40 ವರ್ಷಗಳಿಂದಲೂ ನಡೆದುಕೊಂಡು ಬಂದಿರುವ ಸಂಪ್ರದಾಯ ಇದು.
ಸುಮಾರು ನಾಲ್ಕು ದಶಕಗಳಿಂದ ಹಿಂದೂಗಳು ಮತ್ತು ಮುಸ್ಲಿಮರು ಪರಸ್ಪರ ಒಟ್ಟಾಗಿಯೇ ಹಬ್ಬಗಳನ್ನು ಆಚರಿಸುತ್ತಿದ್ದಾರೆ. ಈ ಹಿಂದೆ ಸಬ್ ರಿಜಿಸ್ಟ್ರಾರ್ ಕಚೇರಿಯಿದ್ದ ಜಾಗದಲ್ಲಿ ಮಸೀದಿ ನಿರ್ಮಾಣವಾಗಿದೆ. 1974ರಲ್ಲಿ ಮಸೀದಿಯನ್ನು ಸ್ಥಾಪಿಸಲಾಯ್ತು. ಮಹಿಷ್ಖೋಲ ಪೂಜಾ ಮಂದಿರ ಸ್ಥಾಪನೆಯಾಗಿದ್ದು 1980ರಲ್ಲಿ. ಕೋಮು ಸೌಹಾರ್ದತೆಯ ಶಕ್ತಿಯನ್ನು ತೋರಿಸಲು ಹೊರಟ ಸ್ಥಳೀಯರು ದೇವಸ್ಥಾನ ಮತ್ತು ಮಸೀದಿ ಎರಡನ್ನೂ ಸರ್ಕಾರಿ ಜಾಗದಲ್ಲಿ, ಅಕ್ಕಪಕ್ಕದಲ್ಲೇ ನಿರ್ಮಿಸಿದ್ದಾರೆ.
ಇದೇ ಸ್ಥಳದಲ್ಲಿ ಆಸ್ಪತ್ರೆ ಕೂಡ ಇದೆ. ‘ಶರೀಫ್ ಅಬ್ದುಲ್ ಹಕೀಮ್ ಮತ್ತು ನರೈಲ್ ಎಕ್ಸ್‌ಪ್ರೆಸ್ ಹಾಸ್ಪಿಟಲ್’ ಎಂಬ ಹೆಸರಿನ ಚಾರಿಟಬಲ್ ಆಸ್ಪತ್ರೆಯನ್ನು ಬಾಂಗ್ಲಾದೇಶದ ಮಾಜಿ ಕ್ರಿಕೆಟಿಗ ಮತ್ತು ಅವಾಮಿ ಲೀಗ್ ನಾಯಕ ಮಶ್ರಫೆ ಬಿನ್ ಮೊರ್ತಜಾ ನಡೆಸುತ್ತಿದ್ದಾರೆ. ಕೋಮು ಸೌಹಾರ್ದತೆಗೆ ಸಾಕ್ಷಿಯಾಗಿ ನಿಂತಿದೆ ಈ ಸ್ಥಳ. ಹಿಂದು-ಮುಸಲ್ಮಾನ್ ಎಂಬ ಬೇಧವಿಲ್ಲದೆ ಎಲ್ಲರೂ ಶಾಂತಿಯುತವಾಗಿ, ಖುಷಿಯಾಗಿ ಬದುಕುತ್ತಿದ್ದಾರೆ. ಎಲ್ಲರೂ ಪರಸ್ಪರರ ಧರ್ಮಗಳನ್ನು ಗೌರವಿಸುತ್ತಾರೆ.
ಆದ್ರೆ ಕಳೆದ ವರ್ಷ ದುರ್ಗಾಪೂಜೆಯ ಸಂದರ್ಭದಲ್ಲಿ ಹಿಂಸಾಚಾರ ನಡೆದಿತ್ತು. ಚಾಂದ್‌ಪುರದ ಹಾಜಿಗಂಜ್, ಚಟ್ಟೋಗ್ರಾಮ್‌ನ ಬನ್ಸ್‌ಖಾಲಿ ಮತ್ತು ಕಾಕ್ಸ್‌ಬಜಾರ್‌ನ ಪೆಕುವಾದಲ್ಲಿ ದೇವಾಲಯಗಳನ್ನು ಧ್ವಂಸ ಮಾಡಲಾಗಿತ್ತು. ಆದ್ರೆ ಈ ಬಾರಿ ಅಂತಹ ಯಾವುದೇ ಘಟನೆಗಳು ನಡೆದಿಲ್ಲ.
ಮಸೀದಿಯಲ್ಲಿ ಪ್ರಾರ್ಥನೆಯ ಸಮಯದಲ್ಲಿ, ದೇವಾಲಯದ ಆಡಳಿತ ಮಂಡಳಿ ಹಾಗೂ ಭಕ್ತರು ಯಾವುದೇ ತೊಂದರೆಯಾಗದಂತೆ ಅನುವು ಮಾಡಿಕೊಡ್ತಾರೆ. ದೇವಾಲಯದ ಪೂಜೆ ವೇಳೆ ಮುಸಲ್ಮಾನರು ಕೂಡ ಯಾವುದೇ ತೊಂದರೆ ಮಾಡುವುದಿಲ್ಲ. ಹಾಗಾಗಿ ಯಾವುದೇ ಸಂಘರ್ಷವಿಲ್ಲದೆ ಪೂಜಾ ಕೈಂಕರ್ಯಗಳು ನಡೆಯುತ್ತಿವೆ.