ಕಳೆದ ಕೆಲವು ದಿನಗಳಿಂದ ರಾಜ್ಯದಾದ್ಯಂತ ಅಕಾಲಿಕ ಮಳೆಯಾಗುತ್ತಿದ್ದು, ರಾಮನಗರ ಜಿಲ್ಲೆಯಲ್ಲಿಯೂ ಸಹ ಎರಡು ದಿನಗಳಿಂದ ನಿರಂತರವಾಗಿ ಮಳೆ ಸುರಿಯುತ್ತಿದೆ. ಇದರಿಂದಾಗಿ ಮಾವು ಬೆಳೆಗಾರರು ಆತಂಕಕ್ಕೆ ಒಳಗಾಗಿದ್ದಾರೆ.
ಈಗ ನಾವು ಹೂವು ಬಿಡುವ ಹಂತದಲ್ಲಿದ್ದು, ಇದರ ಜೊತೆಗೆ ಅನೇಕ ಬೆಳೆಗಾರರು ಮೊದಲ ಔಷಧವನ್ನು ಸಹ ಸಿಂಪಡಿಸಿದ್ದಾರೆ. ಇದರ ಮಧ್ಯೆ ಅಕಾಲಿಕ ಮಳೆಯಾಗುತ್ತಿರುವ ಕಾರಣ ಔಷಧ ಸಿಂಪಡಣೆ ಫಲ ನೀಡದರ ಜೊತೆಗೆ ಹೂ ಕಚ್ಚುವ ಪ್ರಕ್ರಿಯೆ ಕೂಡ ನಿಧಾನವಾಗುತ್ತದೆ ಎಂಬುದು ಆತಂಕಕ್ಕೆ ಕಾರಣವಾಗಿದೆ.
ರಾಮನಗರ ಜಿಲ್ಲೆಯ 30,000 ಹೆಕ್ಟೇರ್ ಪ್ರದೇಶದಲ್ಲಿ ಮಾವು ಬೆಳೆಯಲಾಗಿದ್ದು, ಈ ಭಾಗದಿಂದಲೇ ರಾಜ್ಯಕ್ಕೆ ಮೊದಲ ಮಾವು ಮಾರುಕಟ್ಟೆಗೆ ಸರಬರಾಜಾಗುತ್ತದೆ. ಮಾವು ಹೂ ಬಿಡುತ್ತಿರುವ ಸಂದರ್ಭದಲ್ಲಿಯೇ ಸುರಿಯುತ್ತಿರುವ ಅಕಾಲಿಕ ಮಳೆ, ಇಳುವರಿ ಕಡಿಮೆಯಾಗಲು ಕಾರಣವಾಗಬಹುದು ಎಂದು ಹೇಳಲಾಗುತ್ತಿದೆ.