ಕಳೆದ ರಾತ್ರಿ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಸುರಿದ ಅಕಾಲಿಕ ಮಳೆಗೆ ಜನ ತತ್ತರಿಸಿ ಹೋಗಿದ್ದಾರೆ. ರಾಜಕಾಲುವೆಯಿಂದ ರಸ್ತೆಗೆ ನೀರು ನುಗ್ಗಿದ ಪರಿಣಾಮ ರಸ್ತೆಗಳೆಲ್ಲಾ ಸಂಪೂರ್ಣವಾಗಿ ಜಲಾವೃತವಾಗಿದ್ದು, ವಾಹನ ಸವಾರರು ಪರದಾಡಿದ್ದಾರೆ.
ಶಾಂತಿನಗರ, ವಿಲ್ಸನ್ ಗಾರ್ಡನ್ ಸೇರಿದಂತೆ ಹಲವು ಪ್ರದೇಶಗಳಲ್ಲಿ ಚರಂಡಿ ನೀರು ಮನೆಯೊಳಗೆ ನುಗ್ಗಿದ್ದು, ಇದರಿಂದಾಗಿ ಜನ ನಿದ್ರೆಗೆಟ್ಟು ಮಳೆ ನೀರನ್ನು ಹೊರ ಹಾಕುವ ಕಾರ್ಯದಲ್ಲಿ ನಿರತರಾಗಿದ್ದರು. ರಾಜ ಕಾಲುವೆ ಸಮರ್ಪಕವಾಗಿ ನಿರ್ವಹಿಸದೆ ಇರುವುದೇ ಇದಕ್ಕೆ ಕಾರಣವೆಂದು ಜನ, ಪಾಲಿಕೆ ಅಧಿಕಾರಿಗಳು, ರಾಜಕಾರಣಿಗಳಿಗೆ ಹಿಡಿಶಾಪ ಹಾಕಿದ್ದಾರೆ.
ಇನ್ನು ಕಾಮಾಕ್ಯ ಚಿತ್ರಮಂದಿರದ ಬಳಿ ಸಿನಿಮಾ ನೋಡಲು ಬಂದವರ ಕಾರು ಮಳೆ ನೀರಿನಲ್ಲಿ ಕೊಚ್ಚಿಕೊಂಡು ಹೋಗಿ ಬೈಕ್ ಒಂದರ ಮೇಲೆ ಬಿದ್ದಿದೆ. ಇದರ ಮೇಲೆ ಮತ್ತೊಂದು ಕಾರು ಬಿದ್ದಿದ್ದು, ಕಾರು ಸಂಪೂರ್ಣವಾಗಿ ನಜ್ಜುಗುಜ್ಜಾಗಿದೆ. ಸಿನಿಮಾ ನೋಡಿ ಹೊರ ಬಂದ ಕಾರಿನ ಮಾಲೀಕರು ಅದರ ಅವಸ್ಥೆ ಕಂಡು ಕಣ್ಣೀರಿಟ್ಟಿದ್ದಾರೆ.