
ಪಿವಿ ಸಿಂಧು ಇರಲಿ, ಸೈನಾ ನೆಹ್ವಾಲ್ ಇರಲಿ, ಇವರೆಲ್ಲರ ಸಾಧನೆಯ ಹಿಂದೆ ವ್ಯಕ್ತಿಯೊಬ್ಬರ ಪರಿಶ್ರಮವಿದೆ. ಅವರು ಬೇರಾರೂ ಅಲ್ಲ ಪುಲ್ಲೇಲ ಗೋಪಿಚಂದ್. ಗೋಪಿಚಂದ್ ದ್ರೋಣಾಚಾರ್ಯರಂತ ಗುರುವಾಗಿ ಭಾರತಕ್ಕೆ ಅರ್ಜುನನಂತ ಆಟಗಾರರನ್ನು ನೀಡಿದ್ದಾರೆ.
ಸ್ವತಃ ಯಶಸ್ಸಿನ ತುತ್ತ ತುದಿಯನ್ನು ತಲುಪಲಾಗದ ಗೋಪಿಚಂದ್ ತಮ್ಮ ಶಿಷ್ಯರನ್ನು ಆ ಸ್ಥಾನದಲ್ಲಿ ನೋಡಿದ್ದಾರೆ. ಕೇವಲ ಗುರುವಾಗಿ ಅಲ್ಲ, ಸ್ನೇಹಿತನಾಗಿ ಗೋಪಿಚಂದ್ ತಮ್ಮ ಶಿಷ್ಯರಿಗೆ ಸಲಹೆ ನೀಡಿದ್ದಾರೆ. ತಂದೆ ಸ್ಥಾನದಲ್ಲಿ ನಿಂತು ಯಾವುದು ಸರಿ ಯಾವುದು ತಪ್ಪು ಎಂಬುದನ್ನು ತಿಳಿಸಿ ಹೇಳಿದ್ದಾರೆ.
2003 ರಲ್ಲಿ ಗೋಪಿಚಂದ್ ಅಕಾಡೆಮಿಗಾಗಿ ಆಂಧ್ರ ಸರ್ಕಾರ ಐದು ಎಕರೆ ಜಮೀನನ್ನು ಮಂಜೂರು ಮಾಡಿತ್ತು. ಭೂಮಿಯೇನೋ ಸಿಕ್ಕಿತ್ತು. ಆದ್ರೆ ಅಕಾಡೆಮಿಗೆ ಅವಶ್ಯವಿರುವಷ್ಟು ಆರ್ಥಿಕ ನೆರವು ಸಿಕ್ಕಿರಲಿಲ್ಲ. ಯಾವುದೇ ಉದ್ಯಮಿಗಳಾಗ್ಲಿ, ಬಾಲಿವುಡ್ ಸ್ಟಾರ್ ಗಳಾಗ್ಲಿ ಸಹಾಯಕ್ಕೆ ಬರಲಿಲ್ಲ. ಹಾಗಾಗಿ ಗೋಪಿಚಂದ್ ತಮ್ಮ ಮನೆಯನ್ನು ಅಡವಿಟ್ಟರು. ಈ ವೇಳೆ ಮ್ಯಾಟ್ರಿಕ್ಸ್ ಗ್ರೂಪ್ ನ ಅಧ್ಯಕ್ಷರು ನೆರವಿಗೆ ಬಂದ್ರು.
ಗೋಪಿಚಂದ್ ಗೆ ಅವರು ಎರಡು ಕೋಟಿ ರೂಪಾಯಿಯ ಚೆಕ್ ನೀಡಿದ್ರು. ಇದನ್ನು ಗೋಪಿಚಂದ್ ಗೆ ವಾಪಸ್ ನೀಡಲು ಸಾಧ್ಯವಾಗುವುದಿಲ್ಲ ಎಂಬುದನ್ನರಿತ ಅವರು, ಬಂಗಾರದ ಪದಕ ಗೆಲ್ಲುವ ಆಟಗಾರರನ್ನು ತಯಾರಿಸಿ, ಹಣ ಹಿಂತಿರುಗಿಸುವ ಚಿಂತೆ ಬೇಡ ಎಂದ್ರಂತೆ.