ಅಂದು ಸಿನಿಮಾದಲ್ಲಿ ಮಾತ್ರ ಟ್ಯಾಕ್ಸಿ ನೋಡಿದ್ದಾತ ಇಂದು ಸಾವಿರಾರು ಕೋಟಿ ರೂ. ಒಡೆಯ..! ಎಲ್ಲರಿಗೂ ಸ್ಪೂರ್ತಿಯಾಗುತ್ತೆ ಇವರ ಯಶಸ್ಸಿನ ಕಥೆ
20-02-2022 6:57AM IST
/
No Comments /
Posted In: Latest News , India , Live News , Special
ವೇದಾಂತ ರಿಸೋರ್ಸಸ್ ಲಿಮಿಟೆಡ್‌ನ ಕಾರ್ಯಕಾರಿ ಅಧ್ಯಕ್ಷ ಮತ್ತು ಸಂಸ್ಥಾಪಕ ಅನಿಲ್ ಅಗರ್ವಾಲ್ ಅವರು ನಡೆದು ಬಂದ ಹಾದಿಯನ್ನು ನೆನಪಿಸಿಕೊಂಡಿದ್ದಾರೆ. ಇಂದು ಅವರು ಬಿಲಿಯನೇರ್ ಆಗಿರಬಹುದು. ಆದರೆ, ಈ ತುತ್ತ ತುದಿ ತಲುಪಲು ಅವರು ಸವೆಸಿದ ಹಾದಿ ಹೂವಿನ ಹಾದಿಯಾಗಿರಲಿಲ್ಲ.
ಹದಿಹರೆಯದ (19 ನೇ) ವಯಸ್ಸಿನಲ್ಲಿ ಸಾಕಷ್ಟು ಕನಸ್ಸುಗಳನ್ನಿಟ್ಟುಕೊಂಡು ಮನೆಯನ್ನು ತೊರೆದು ಮಹಾನಗರಿ ಮುಂಬೈಗೆ ಕಾಲಿಟ್ಟಾಗ ಅವರು ತಂದಿದ್ದು, ಟಿಫಿನ್ ಬಾಕ್ಸ್ ಮತ್ತು ಹಾಸಿಗೆ ಮಾತ್ರ. ತಮ್ಮ ಕನಸುಗಳನ್ನು ನನಸು ಮಾಡಿಕೊಳ್ಳಲು ಪ್ರತಿವರ್ಷ ಮಹಾನಗರಿಗೆ ಆಗಮಿಸುವ ಲಕ್ಷಾಂತರ ಜನರಲ್ಲಿ ಅಗರ್ವಾಲ್ ಕೂಡ ಒಬ್ಬರು. ಇಂದು ಅಂದಾಜು 3.6 ಶತಕೋಟಿ ಡಾಲರ್ ಮೌಲ್ಯದ (ಫೋರ್ಬ್ಸ್ ಪ್ರಕಾರ) ಆಸ್ತಿಯ ಒಡೆಯರಾಗಿದ್ದಾರೆ.
ಈ ವಾರದ ಆರಂಭದಲ್ಲಿ ಹಂಚಿಕೊಂಡ ಟ್ವೀಟ್‌ನಲ್ಲಿ, 67 ವರ್ಷದ ಅನಿಲ್ ಅಗರ್ವಾಲ್ ಅವರು ಬಿಹಾರವನ್ನು ತೊರೆದು ಮುಂಬೈಗೆ ಬಂದ ದಿನವನ್ನು ನೆನಪಿಸಿಕೊಂಡಿದ್ದಾರೆ. ಲಕ್ಷಾಂತರ ಜನರು ತಮ್ಮ ಅದೃಷ್ಟವನ್ನು ಪರೀಕ್ಷಿಸಲು ಮುಂಬೈಗೆ ಬರುತ್ತಾರೆ. ಅವರಲ್ಲಿ ತಾನೂ ಒಬ್ಬ. ಟಿಫಿನ್ ಬಾಕ್ಸ್, ಹಾಸಿಗೆ, ಮತ್ತು ನನ್ನ ಕಣ್ಣುಗಳಲ್ಲಿ ಕನಸುಗಳೊಂದಿಗೆ ತಾನು ಬಿಹಾರದಿಂದ ಹೊರಟ ದಿನ ಈಗಲೂ ತನಗೆ ನೆನಪಿದೆ ಎಂಬುದಾಗಿ ತಮ್ಮ ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದ್ದಾರೆ.
ಮುಂಬೈನ ಐಕಾನಿಕ್ ವಿಕ್ಟೋರಿಯಾ ಟರ್ಮಿನಸ್ ನಿಲ್ದಾಣಕ್ಕೆ ಬಂದ ಅವರು, ಅಲ್ಲಿಯವರೆಗೆ ಚಲನಚಿತ್ರಗಳಲ್ಲಿ ಮಾತ್ರ ನೋಡಿದ್ದ ದೃಶ್ಯಗಳನ್ನು ಕಂಡು ಅಚ್ಚರಿಗೊಳಗಾಗಿದ್ದಾರೆ. ಟ್ಯಾಕ್ಸಿ, ಡಬಲ್ ಡೆಕ್ಕರ್ ಬಸ್ ಮುಂತಾದವುಗಳನ್ನು ಅವರು ಅಲ್ಲಿವರೆಗೆ ಚಲನಚಿತ್ರಗಳಲ್ಲಿ ಮಾತ್ರ ನೋಡಿದ್ದರಂತೆ. ಕಷ್ಟಪಟ್ಟು ಕೆಲಸ ಮಾಡಿ ಇದೀಗ ಬಿಲಿಯನೇರ್ ಆಗಿರುವ ಅವರ ಗೆಲುವು ಯುವಪೀಳಿಗೆಯಲ್ಲಿ ಮತ್ತಷ್ಟು ಉತ್ಸಾಹ ಚಿಮ್ಮುವುದರಲ್ಲಿ ಸಂಶಯವೇ ಇಲ್ಲ.
ನೀವು ಮೊದಲ ಹೆಜ್ಜೆಯನ್ನು ದೃಢಸಂಕಲ್ಪದಿಂದ ಇಟ್ಟರೆ, ಯಶಸ್ಸು ಖಚಿತ ಎಂಬುದಾಗಿ ಅಗರ್ವಾಲ್ ಯುವಕರಿಗೆ ಪ್ರೋತ್ಸಾಹದ ಮಾತುಗಳನ್ನು ನುಡಿದಿದ್ದಾರೆ. ಈ ಮೂಲಕ ಕಷ್ಟಪಟ್ಟು ಕೆಲಸ ಮಾಡಿದ್ರೆ, ತಮ್ಮ ಕೆಲಸಕ್ಕೆ ಸಾರ್ಥಕ ಪ್ರತಿಫಲ ಸಿಕ್ಕೇಸಿಗುತ್ತದೆ ಎಂಬುದಕ್ಕೆ ಇಂದು ಅಗರ್ವಾಲ್ ಅವರೇ ಸಾಕ್ಷಿಯಾಗಿದ್ದಾರೆ.
ವೇದಾಂತ ಇಂಡಸ್ಟ್ರಿ ಅಗರ್ವಾಲ್ ಅವರ ಗಣಿಗಾರಿಕೆ ಕಂಪನಿಯಾಗಿದೆ. ಮುಂಬೈನಲ್ಲಿ ಸ್ಕ್ರ್ಯಾಪ್ ಮೆಟಲ್ ಡೀಲರ್‌ಶಿಪ್ ಆಗಿ ಸ್ಥಾಪಿತವಾಗಿದೆ. ಇದು ಇಂದು ಭಾರತದ ಅತಿದೊಡ್ಡ ಗಣಿಗಾರಿಕೆ ಕಂಪನಿಗಳಲ್ಲಿ ಒಂದಾಗಿದೆ.