ಮಗಳು ಪ್ರೀತಿಸಿ ಮದುವೆಯಾಗಿದ್ದಾಳೆ ಎಂದ ಮಾತ್ರಕ್ಕೆ ತಂದೆ – ಮಗಳ ಸಂಬಂಧವು ಅಲ್ಲಿಗೆ ಕೊನೆಯಾಗುವುದಿಲ್ಲ. ಮದುವೆಯ ಬಳಿಕವೂ ಮಗಳಿಗೆ ಅವರು ತಂದೆಯಾಗಿಯೇ ಇರುತ್ತಾರೆ ಎಂದು ಮಧ್ಯಪ್ರದೇಶ ಹೈಕೋರ್ಟ್ ಹೇಳಿದೆ.
ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ನ್ಯಾಯಮೂರ್ತಿಗಳಾದ ಶೀಲ್ ನಾಗು ಹಾಗೂ ನ್ಯಾಯಮೂರ್ತಿ ಎಂ.ಎಸ್. ಭಟ್ಟಿ, ಯುವತಿಯು ವಯಸ್ಕಳಾದ ಹಿನ್ನೆಲೆಯಲ್ಲಿ ಆಕೆಗೆ ತನ್ನಿಚ್ಛೆಯಂತೆ ಬದುಕುವ ಎಲ್ಲಾ ಸ್ವಾತಂತ್ರ್ಯವಿದೆ ಎಂದು ಹೇಳಿದರು.
ಏನಿದು ಪ್ರಕರಣ…?
ಹೋಶಂಗಾಬಾದ್ ನಿವಾಸಿಯಾದ ಫೈಸಲ್ ಖಾನ್ ಎಂಬಾತ ಕೋರ್ಟ್ಗೆ ಅರ್ಜಿ ಸಲ್ಲಿಸಿದ್ದನು. ಈ ಅರ್ಜಿಯಲ್ಲಿ ಆತ ಧರ್ಮದಲ್ಲಿ ಹಿಂದೂ ಆಗಿರುವ ನನ್ನ ಗೆಳತಿಯನ್ನು ಬಲವಂತವಾಗಿ ನಾರಿ ನಿಕೇತನದಲ್ಲಿ ಇರಿಸಲಾಗಿದೆ. ನಾವು ಪರಸ್ಪರ ಪ್ರೀತಿಸುತ್ತಿದ್ದೇವೆ. ಯುವತಿಗೆ 19 ವರ್ಷ ವಯಸ್ಸಾಗಿದ್ದು ನಾನು ಕೂಡ ವಯಸ್ಕ ಎಂದು ಹೇಳಿದ್ದನು.
ಜನವರಿ ಮೊದಲ ವಾರದಂದು ಯುವತಿಯು ತನ್ನ ಮನೆಯನ್ನು ತೊರೆದು ಪ್ರಿಯಕರನ ಜೊತೆ ವಾಸವಿದ್ದಳು. ಇದಾದ ಬಳಿಕ ಯುವತಿಯ ತಂದೆಯು ಪುತ್ರಿ ನಾಪತ್ತೆಯಾಗಿದ್ದಾಳೆ ಎಂದು ದೂರನ್ನು ನೀಡಿದ್ದರು.ಈ ಪ್ರಕರಣ ದಾಖಲಾದ ಬಳಿಕ ಯುವಕ ಹಾಗೂ ಯುವತಿ ಇಬ್ಬರು ಠಾಣೆಗೆ ಆಗಮಿಸಿ ನಾವು ನಮ್ಮಿಚ್ಛೆಯಂತೆ ಒಟ್ಟಿಗೆ ಬದುಕುತ್ತಿದ್ದೇವೆ ಎಂದು ಹೇಳಿದರು. ಇದಾದ ಬಳಿಕ ಇಬ್ಬರೂ ಭೋಪಾಲ್ನಲ್ಲಿ ವಾಸಿಸಲು ಆರಂಭಿಸಿದ್ದರು.
ಫೆಬ್ರವರಿ ತಿಂಗಳು ಪೊಲೀಸರು ಹೇಳಿಕೆಯನ್ನು ದಾಖಲಿಸಿಕೊಳ್ಳಲು ಇಬ್ಬರನ್ನೂ ಠಾಣೆಗೆ ಕರೆಸಿದ್ದರು. ಇಲ್ಲಿ ಯಾವುದೇ ಹೇಳಿಕೆಗಳನ್ನು ದಾಖಲಿಸಿಕೊಳ್ಳದೇ ಯುವತಿಯನ್ನು ನಾರಿ ನಿಕೇತನಕ್ಕೆ ಕಳುಹಿಸಲಾಗಿತ್ತು. ಇದರ ವಿರುದ್ಧ ಫೈಸಲ್ ಖಾನ್ ಕೋರ್ಟ್ ಮೆಟ್ಟಿಲೇರಿದ್ದನು. ಅರ್ಜಿ ವಿಚಾರಣೆಯ ಸಂದರ್ಭದಲ್ಲಿ ವಿಡಿಯೋ ಕಾನ್ಫರೆನ್ಸ್ನಲ್ಲಿ ಮಾತನಾಡಿದ್ದ ಯುವತಿಯು ತಾನು ಫೈಸಲ್ ಜೊತೆ ಇರಲು ಇಚ್ಛಿಸುತ್ತೇನೆ ಎಂದಿದ್ದಳು.
ಹೈಕೋರ್ಟ್ ನೀಡಿದ ನಿರ್ದೇಶನದಂತೆ ಅರ್ಜಿದಾರ ಫೈಸಲ್ ತನ್ನ ಶಿಕ್ಷಣ, ಆದಾಯ ಹಾಗೂ ಧರ್ಮದ ಬಗ್ಗೆ ಅಫಿಡವಿಟ್ ಸಲ್ಲಿಸಿದನು. ಇಬ್ಬರೂ ತಮ್ಮ ಧರ್ಮವನ್ನು ಅನುಸರಿಸಲು ಸ್ವತಂತ್ರ ಅಧಿಕಾರವನ್ನು ಹೊಂದಿದ್ದಾರೆ. ಇಬ್ಬರೂ ವಿಶೇಷ ವಿವಾಹ ಕಾಯ್ದೆಯ ಅಡಿಯಲ್ಲಿ ವಿವಾಹವಾಗಲಿದ್ದಾರೆ ಎಂದು ಅಫಿಡವಿಟ್ನಲ್ಲಿ ತಿಳಿಸಲಾಗಿತ್ತು.
ಮಂಗಳವಾರದಂದು ಅರ್ಜಿ ವಿಚಾರಣೆ ಸಂಬಂಧ ಯುವಕ ಹಾಗೂ ಯುವತಿ ಕೋರ್ಟ್ ಮುಂದೆ ಹಾಜರಾಗಿದ್ದರು. ಇತ್ತ ಯುವತಿಯ ತಂದೆ ಹಾಗೂ ಸಹೋದರ ಕೂಡ ಹಾಜರಾಗಿದ್ದರು. ವಾದ – ವಿವಾದಗಳನ್ನು ಆಲಿಸಿದ ಹೈಕೋರ್ಟ್, ಮದುವೆಯ ಬಳಿಕವೂ ತಂದೆಗೆ ತನ್ನ ಮಗಳನ್ನು ರಕ್ಷಿಸುವ ಅಧಿಕಾರ ಇದ್ದೇ ಇರುತ್ತದೆ. ಹೀಗಾಗಿ ಮದುವೆಯ ಬಳಿಕವೂ ತಂದೆಯು ತನ್ನ ಪುತ್ರಿಯ ಜೊತೆ ಸಂಪರ್ಕದಲ್ಲಿ ಇರಬೇಕೆಂದು ಕೋರ್ಟ್ ಆಶಿಸುತ್ತದೆ. ಪುತ್ರಿಗೆ ಆರ್ಥಿಕವಾಗಿ ಹಾಗೂ ಭಾವನಾತ್ಮಕವಾಗಿ ತಂದೆಯು ಬೆಂಬಲ ನೀಡಬಹುದು ಎಂದು ಹೇಳಿದೆ.