ಭಾರತ ಬಹು ಸಂಸ್ಕೃತಿಗಳ ನಾಡು. ಬೇರೆ ಬೇರೆ ಜನಾಂಗ, ಸಂಸ್ಕೃತಿ ಮತ್ತು ಭಾಷೆಯ ಜನರು ಇಲ್ಲಿ ವಾಸಿಸ್ತಾರೆ. ಅಂತರ್ಜಾತಿ ವಿವಾಹ ಅಂದಾಕ್ಷಣ ಮೂಗು ಮುರಿಯುವವರೇ ಹೆಚ್ಚು. ಬೇರೆ ಜಾತಿಯವರೊಂದಿಗೆ ಮದುವೆ ಅಂದಾಕ್ಷಣ ಮನೆಯಲ್ಲಿ ಕಿತ್ತಾಟ, ಜಗಳ ಸಾಮಾನ್ಯ. ಕೆಲವು ಮದುವೆಗಳು ಮರ್ಯಾದಾ ಹತ್ಯೆಯಲ್ಲಿ ದುರಂತ ಅಂತ್ಯವನ್ನೂ ಕಂಡಿವೆ.
ಬೇರೆ ಬೇರೆ ತೆರನಾದ ನಂಬಿಕೆ ಮತ್ತು ಸಂಪ್ರದಾಯಗಳಿಂದಾಗಿ ಜನರು ಅಂತರ್ಜಾತಿ ವಿವಾಹಗಳನ್ನು ಒಪ್ಪಿಕೊಳ್ಳುವುದಿಲ್ಲ. ಆದ್ರೆ ಹೊಂದಾಣಿಕೆಯೊಂದಿದ್ರೆ ಯಾವುದೂ ಅಸಾಧ್ಯವಲ್ಲ. ಅಂತರ್ಜಾತಿ ಮದುವೆಯಿಂದ್ಲೂ ಸಾಕಷ್ಟು ಪ್ರಯೋಜನಗಳಿವೆ. ಅವು ಯಾವುದು ಅನ್ನೋದನ್ನು ನೋಡೋಣ.
ಚಿಂತನೆ ಮತ್ತು ದೃಷ್ಟಿಕೋನಗಳು ಸೀಮಿತವಾಗಿರುವುದಿಲ್ಲ : ಬೇರೆ ಬೇರೆ ನಂಬಿಕೆಗಳನ್ನು ಹೊಂದಿದ ಇಬ್ಬರು ಒಂದಾದಾಗ ಅವರ ಚಿಂತನೆಗಳು ಬದಲಾಗುತ್ತವೆ. ಬೇರೆಯವರನ್ನು ಒಪ್ಪಿಕೊಳ್ಳುವ ಭಾವನೆ ಬೆಳೆಯುತ್ತದೆ. ಸಹಿಷ್ಣುತೆ ಹೆಚ್ಚಾಗುತ್ತದೆ. ನಿಮ್ಮ ಬದುಕು ಪ್ರತಿದಿನವೂ ವಿಭಿನ್ನವಾಗಿರುತ್ತದೆ.
ಹೊಸ ವಿಷಯಗಳನ್ನು ಕಲಿಯಲು ಅವಕಾಶ : ಬೇರೆ ಜಾತಿಯವರನ್ನು ಮದುವೆಯಾಗುವುದು ಅಂದ್ರೆ ಹೊಸತನ್ನು ಕಲಿಯಲು ಅವಕಾಶದ ಬಾಗಿಲು ತೆರೆದಂತೆ. ವಿವಿಧ ಸಂಸ್ಕೃತಿ, ಆಚಾರ ವಿಚಾರ, ಆಹಾರ ಪದ್ಧತಿ ಎಲ್ಲವನ್ನೂ ಕಲಿಯಬಹುದು. ಬೇರೆ ಬೇರೆ ಹಬ್ಬಗಳನ್ನು ಆಚರಿಸುವುದರಿಂದ ಮನೆಯಲ್ಲೂ ಖುಷಿಯ ವಾತಾವರಣವಿರುತ್ತದೆ.
ಬುದ್ಧಿವಂತ ಮಕ್ಕಳನ್ನು ಪಡೆಯಬಹುದು : ಸಮೀಕ್ಷೆಯ ಪ್ರಕಾರ ಅಂತರ್ಜಾತಿ ವಿವಾಹವಾದ ದಂಪತಿಗೆ ಜನಿಸುವ ಮಕ್ಕಳು ಹೆಚ್ಚು ಬುದ್ಧಿವಂತರಾಗಿರುತ್ತಾರೆ. ಜೀನ್ಗಳಲ್ಲಿನ ವ್ಯತ್ಯಾಸದಿಂದಾಗಿ ಮಕ್ಕಳಲ್ಲಿ ಚುರುಕುತನ ಹೆಚ್ಚಾಗುತ್ತದೆ.
ಮಕ್ಕಳನ್ನು ಚೆನ್ನಾಗಿ ಬೆಳೆಸಬಹುದು : ದಂಪತಿ ಬೇರೆ ಬೇರೆ ಜಾತಿಯವರಾದ್ರೆ ಬದುಕನ್ನು ಆಧುನಿಕ ಮತ್ತು ವಿಶಾಲ ದೃಷ್ಟಿಕೋನದಿಂದ ಗಮನಿಸುತ್ತಾರೆ. ಅದು ಮಕ್ಕಳ ಪೋಷಣೆ ಮೇಲೆ ಉತ್ತಮ ಪರಿಣಾಮ ಬೀರುತ್ತದೆ. ಸ್ವಂತ ಆಯ್ಕೆಗಳ ಬಗ್ಗೆ ಮಕ್ಕಳಿಗೆ ಪಾಠ ಕಲಿಸಬಹುದು. ಅವರ ಆಯ್ಕೆಯನ್ನು ಗೌರವಿಸಬಹುದು.
ಹೆಚ್ಚು ಹೊಂದಾಣಿಕೆ : ಬೇರೆ ಸಂಸ್ಕೃತಿ ಸಂಪ್ರದಾಯದ ಇಬ್ಬರು ಜೊತೆಯಾಗಿ ವಾಸಿಸಿದಾಗ ಪರಸ್ಪರ ಹೊಂದಿಕೊಳ್ಳುವ ಸ್ವಭಾವ ಬೆಳೆಯುತ್ತದೆ. ಪರಸ್ಪರರ ಸಂಪ್ರದಾಯ ಮತ್ತು ಆಚರಣೆಗಳನ್ನು ಅನುಸರಿಸುವುದರಿಂದ ಅಡ್ಜಸ್ಟ್ ಮಾಡಿಕೊಳ್ಳುವ ಸ್ವಭಾವ ರೂಢಿಯಾಗುತ್ತದೆ.