ಮೃತ ವ್ಯಕ್ತಿಗಳಿಂದ ಅಂಗಾಂಗ ಪಡೆಯುವ ಕುರಿತಂತೆ ಕೇಂದ್ರ ಸರ್ಕಾರ ಮಹತ್ವದ ತೀರ್ಮಾನ ಕೈಗೊಂಡಿದೆ. 65 ವರ್ಷ ಮೇಲ್ಪಟ್ಟ ರೋಗಿಗಳೂ ಸಹ ಅಂಗಾಂಗ ಪಡೆಯಲು ಹೆಸರು ನೋಂದಾಯಿಸಬಹುದಾಗಿದ್ದು, ಇದಕ್ಕಾಗಿ ಕಾನೂನಿನಲ್ಲಿ ಮಾರ್ಪಾಡು ಮಾಡಲಾಗಿದೆ.
ಅಲ್ಲದೆ ವಾಸ ಸ್ಥಳದ ಮಾನದಂಡ ನಿಯಮವನ್ನು ಸಹ ರದ್ದುಪಡಿಸುವಂತೆ ಕೇಂದ್ರ ಆರೋಗ್ಯ ಸಚಿವಾಲಯ ಎಲ್ಲ ರಾಜ್ಯ ಸರ್ಕಾರಗಳಿಗೆ ಸೂಚನೆ ನೀಡಿದ್ದು, ಜೊತೆಗೆ ಹೆಸರು ನೋಂದಾವಣೆಗೆ ಯಾವುದೇ ಶುಲ್ಕ ವಿಧಿಸದಂತೆ ತಾಕೀತು ಮಾಡಿದೆ.
ಈ ಮೊದಲು 65 ವರ್ಷ ವಯೋಮಿತಿ ಒಳಗಿನವರು ಮಾತ್ರ ಅಂಗಾಂಗ ಪಡೆಯಲು ಅವಕಾಶವಿತ್ತು. ಅಲ್ಲದೆ ಕೆಲ ರಾಜ್ಯಗಳಲ್ಲಿ ಸ್ಥಳೀಯ ರೋಗಿಗಳಿಗೆ ಮಾತ್ರ ಹೆಸರು ನೋಂದಾಯಿಸಲು ಅವಕಾಶ ಕಲ್ಪಿಸಿದ್ದು, ಈಗ ಇದಕ್ಕೆ ಬದಲಾವಣೆ ಮಾಡಲಾಗುತ್ತದೆ. ಜೊತೆಗೆ ಹೆಸರು ನೋಂದಾಯಿಸಲು ಐದು ಸಾವಿರದಿಂದ ಹತ್ತು ಸಾವಿರದವರೆಗೆ ಶುಲ್ಕ ವಿಧಿಸಲಾಗುತ್ತಿದ್ದು, ಅದು ಈಗ ರದ್ದುಗೊಳ್ಳಲಿದೆ.