ಅಂಗವಿಕಲರ ಆರೋಗ್ಯಕ್ಕಾಗಿ ಸರ್ಕಾರ ವಿಶೇಷ ವಿಮಾ ಯೋಜನೆಯನ್ನು ರೂಪಿಸಲಿದ್ದು, 5 ಲಕ್ಷ ರೂಪಾಯಿವರೆಗಿನ ಚಿಕಿತ್ಸಾ ವೆಚ್ಚವನ್ನು ಸರ್ಕಾರವೇ ಭರಿಸಲಿದೆ. ಈ ನಿಟ್ಟಿನಲ್ಲಿ ವಿಶೇಷ ಆರೋಗ್ಯ ವಿಮಾ ಯೋಜನೆಯನ್ನು ರೂಪಿಸಿ ಮುಂದಿನ ಬಜೆಟ್ ನಲ್ಲಿ ಇದಕ್ಕಾಗಿ ಹಣ ಮೀಸಲಿಡಲಾಗುತ್ತದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಘೋಷಿಸಿದ್ದಾರೆ.
ಶನಿವಾರದಂದು ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ವಿಕಲಚೇತನರು ಹಾಗೂ ಹಿರಿಯ ನಾಗರೀಕರ ಸಬಲೀಕರಣ ನಿರ್ದೇಶನಾಲಯದ ವತಿಯಿಂದ ಆಯೋಜಿಸಲಾಗಿದ್ದ ವಿಶ್ವ ಅಂಗವಿಕಲರ ದಿನಾಚರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು ಈ ವಿಷಯ ತಿಳಿಸಿದ್ದಾರೆ.
ಅಲ್ಲದೆ ಸರ್ಕಾರ ನಿರ್ಮಿಸುವ ಮನೆಗಳಲ್ಲಿ ಅಂಗವಿಕಲರಿಗೆ ಶೇಕಡಾ 3ರಷ್ಟು ಮೀಸಲಾತಿಯನ್ನು ನೀಡಲಾಗುತ್ತದೆ. ಜೊತೆಗೆ ಬುದ್ಧಿಮಾಂದ್ಯ ಮಕ್ಕಳಿಗಾಗಿ ಆಶ್ರಯ ಕಾರ್ಯಾಗಾರಗಳನ್ನು ಸ್ಥಾಪಿಸಲಾಗುತ್ತದೆ ಎಂದು ತಿಳಿಸಿದ ಮುಖ್ಯಮಂತ್ರಿಗಳು, ಅಂಗವಿಕಲರಿಗೆ ವಿದ್ಯುತ್ ಚಾಲಿತ ಮೂರು ಚಕ್ರದ ಸೈಕಲ್ ನೀಡಲು ಅನುದಾನ ಬಿಡುಗಡೆ ಮಾಡಲಾಗಿದೆ. ಮಾರ್ಚ್ 31ರೊಳಗೆ 2000 ತ್ರಿಚಕ್ರ ಸೈಕಲ್ ಗಳನ್ನು ವಿತರಿಸಲು ತೀರ್ಮಾನಿಸಲಾಗಿದೆ ಎಂದು ಹೇಳಿದರು.