ಕುಣಿಗಲ್: ವ್ಯಾಪಾರ ವಹಿವಾಟು ಮಾಡುವ ಮಾಲೀಕರಿಗೆ ಪ್ರಾಮಾಣಿಕ ಕೆಲಸಗಾರ ಸಿಕ್ಕರೆ ಸಾಕು, ಯಾವುದನ್ನೂ ಲೆಕ್ಕಿಸದೆ ಅವರ ಮೂಲಕ ವ್ಯವಹಾರ ಪ್ರಾರಂಭಿಸಿರುತ್ತಾರೆ. ಆದರೆ, ಆ ಕೆಲಸಗಾರನ ಮನಸ್ಸಲ್ಲಿ ವಂಚನೆ ಹೊಕ್ಕರೆ ಏನಾಗಬಹುದು? ಇಂತಹ ಘಟನೆಯೊಂದು ಸದ್ಯ ಬೆಳಕಿಗೆ ಬಂದಿದೆ.
ಈ ಘಟನೆ ಕುಣಿಗಲ್ ತಾಲೂಕಿನಲ್ಲಿ ನಡೆದಿದೆ. ಸಮೀಪದ ಎಡೆಯೂರಿನ ಮೇಗಲಹಳ್ಳಿ ಹತ್ತಿರ ಜಿಯಾವುಲ್ಲಾ ಎಂಬ ವ್ಯಕ್ತಿ ಗೋಲ್ಡ್ ಲೂಮ್ ಹೆಸರಿನಲ್ಲಿ ಡ್ರೈ ಫ್ರೂಟ್ಸ್ ಅಂಗಡಿ ತೆರೆದಿದ್ದರು. ಈ ಅಂಗಡಿಯಲ್ಲಿ ಮಂಗಳೂರು ಮೂಲದ ಸಾದತ್ ರಿಜ್ವಾನ್ ಎಂಬ ಯುವಕ ಕೆಲಸ ಮಾಡುತ್ತಿದ್ದ.
ಆರಂಭದಲ್ಲಿ ಈ ಯುವಕ ಅಂಗಡಿಯ ಮಾಲೀಕರಿಗೆ ತುಂಬಾ ಪ್ರಾಮಾಣಿಕನಂತೆ ಕಾರ್ಯ ನಿರ್ವಹಿಸಿದ್ದಾನೆ. ಹೀಗಾಗಿ ಮಾಲೀಕರು ಕೂಡ ಈತನನ್ನು ಹೆಚ್ಚಾಗಿ ನಂಬಿದ್ದರು. ಮಾಲೀಕರು ಇಲ್ಲದ ಸಂದರ್ಭದಲ್ಲಿ ಈ ವ್ಯಕ್ತಿಯೇ ಸಂಪೂರ್ಣವಾಗಿ ವ್ಯವಹಾರ ನೋಡಿಕೊಳ್ಳುತ್ತಿದ್ದ. ಆದರೆ, ಮಾಲೀಕರಿಗೆ ಮೋಸ ಮಾಡಬೇಕೆಂಬ ದುರ್ಬುದ್ದಿ ಇವನಲ್ಲಿ ಹೊಕ್ಕಿದೆ. ಹೀಗಾಗಿ ಡಿಜಿಟಲ್ ಪೇಮೆಂಟ್ ನ ಸ್ಕ್ಯಾನರ್ ನ್ನೇ ಬದಲಾಯಿಸಿದ್ದಾನೆ. ಇದರಿಂದಾಗಿ ಮಾಲೀಕನಿಗೆ ಬರೋಬ್ಬರಿ 13 ಲಕ್ಷ ರೂ. ವಂಚಿಸಿದ್ದಾನೆ.
ಈ ಯುವಕ ಕಳೆದ ಮೂರ್ನಾಲ್ಕು ತಿಂಗಳುಗಳಿಂದಲೂ ಈ ಕಾರ್ಯ ಮಾಡಿದ್ದಾನೆ. ಅಂಗಡಿಯಲ್ಲಿದ್ದ ಫೋನ್ ಪೇ, ಗೂಗಲ್ ಪೇ ಸ್ಕ್ಯಾನರ್ ಗಳನ್ನೇ ಬದಲಾಯಿಸಿದ್ದಾನೆ. ಹೀಗಾಗಿ ಮಾಲೀಕನ ಖಾತೆಗೆ ಹೋಗಬೇಕಿದ್ದ ಹಣ ಈ ವ್ಯಕ್ತಿಯ ಖಾತೆಗೆ ಹೋಗಿದೆ. ಇದರಿಂದಾಗಿ ಮಾಲೀಕನಿಗೆ ದೊಡ್ಡ ಮಟ್ಟದ ನಷ್ಟವಾಗಿದೆ. ಸಂಶಯಗೊಂಡ ಮಾಲೀಕ, ಸ್ಕ್ಯಾನರ್ ಗಳನ್ನು ಪರಿಶೀಲಿಸಿದಾಗ ಈ ವಿಷಯ ಬೆಳಕಿಗೆ ಬಂದಿದೆ.
ಹೀಗಾಗಿ ಮಾಲೀಕ ಜಿಯಾವುಲ್ಲಾ, ಕೆಲಸಗಾರನ ವಿರುದ್ಧ ಅಮೃತೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಮಾಲೀಕನಿಗೆ ಎಲ್ಲ ಸಂಗತಿ ತಿಳಿಯುತ್ತಿದ್ದಂತೆ ಯುವಕ ತಲೆ ಮರೆಸಿಕೊಂಡಿದ್ದು, ಪೊಲೀಸರು ಆತನಿಗಾಗಿ ಬಲೆ ಬೀಸಿದ್ದಾರೆ.