ನಿಮ್ಮ ಎದುರಿನಿಂದ ಕಪ್ಪು ಬೆಕ್ಕು ದಾಟುವುದನ್ನು ಅಪಶಕುನ ಅಂತಾನೇ ಪರಿಗಣಿಸಲಾಗುತ್ತದೆ. ಅನೇಕ ಜನರು ಇತರರನ್ನು ತಮ್ಮ ಮುಂದೆ ಹಾದುಹೋಗಲು ಬಿಟ್ಟು, ತಾವು ಸ್ವಲ್ಪ ಹೊತ್ತು ವಾಹನವನ್ನು ಬದಿಗೆ ಸರಿಸಿ ನಿಲ್ಲುತ್ತಾರೆ. ನಡೆಯುತ್ತಾ ಹೊರಟವರಾದ್ರೆ ಅಲ್ಲೆ ಕೆಲ ಹೊತ್ತು ನಿಂತು ಬಿಡುತ್ತಾರೆ. ಇದರಿಂದ ಅಪಶಕುನದಿಂದ ಪಾರಾದೆವು ಎಂಬ ನಿಟ್ಟುಸಿರು ಬಿಡುತ್ತಾರೆ. ಇನ್ನೂ ಕೆಲವರು ಬೆಕ್ಕನ್ನು ನೋಡಿದಾಕ್ಷಣ ತೆಂಗಿನ ಮರ ಎಲ್ಲಿದೆ ಅಂತಾ ಹುಡುಕುತ್ತಾರೆ. ತಾವೆಷ್ಟು ತೆಂಗಿನಮರ ನೋಡಿದೆವೆಂದು ಲೆಕ್ಕ ಹಾಕಿದ್ರೆ, ಅಲ್ಲಿಗೆ ಅಪಶಕುನದಿಂದ ಪಾರಾದೆವು ಅನ್ನೋ ನಂಬಿಕೆ ಹಲವರಲ್ಲಿದೆ.
ಒಡೆದ ಕನ್ನಡಿ:
ಒಡೆದ ಕನ್ನಡಿಗಳನ್ನು ಅಪಶಕುನ ಅಂತಾನೇ ಪರಿಗಣಿಸಲಾಗುತ್ತದೆ. ಏನಾದರೂ ಶುಭ ಸಮಾರಂಭವಿದ್ರೆ ಕನ್ನಡಿ ಒಡೆಯಬಾರದು ಅನ್ನೋ ನಂಬಿಕೆಯಿದೆ. ಒಂದು ವೇಳೆ ಹಾಗಾಗಿದ್ದಲ್ಲಿ ಆ ಕಾರ್ಯಕ್ರಮವೇ ನಿಂತು ಹೋಗಬಹುದು ಅನ್ನೋದು ಜನರ ನಂಬಿಕೆ.
ಕಣ್ಣಿನ ಸೆಳೆತ
ಇದಕ್ಕಿದ್ದಂತೆ ಕಣ್ಣುಗಳಲ್ಲಿ ಸೆಳೆತವುಂಟಾದರೆ ಕೆಲವು ಸಂಸ್ಕೃತಿಗಳಲ್ಲಿ ಅದೃಷ್ಟ ಅಂತಾ ಪರಿಗಣಿಸಲಾಗುತ್ತದೆ. ಭಾರತೀಯರ ಪ್ರಕಾರ ಕಣ್ಣಿನ ಸೆಳೆತ ಉಂಟಾದ್ರೆ ಏನೋ ಕಾದಿದೆ ಎಂದು ಭಯ ಪಡುತ್ತಾರೆ. ಇದು ಲಿಂಗದ ಪ್ರಕಾರವೂ ಭಿನ್ನವಾಗಿರುತ್ತದೆ.
ಎಡಗಣ್ಣು/ಬಲಗಣ್ಣಿನಲ್ಲಿ ಒಂದು ಕಣ್ಣು ಸೆಳೆತ ಗಂಡಸರಿಗೆ ಅದೃಷ್ಟವಾದ್ರೆ, ಆ ಕಣ್ಣು ಹೆಂಗಳೆಯರಿಗೆ ಅಪಶಕುನವಾಗಿರುತ್ತದೆ. ಇನ್ನೊಂದು ಕಣ್ಣು ಹೆಂಗಳೆಯರಿಗೆ ಅದೃಷ್ಟ ತಂದ್ರೆ, ಅದೇ ಕಣ್ಣು ಗಂಡಸರಿಗೆ ಕೆಟ್ಟದಾಗುತ್ತೆ ಅನ್ನೋ ನಂಬಿಕೆಯಿದೆ. ವೈಜ್ಞಾನಿಕವಾಗಿ ಕಣ್ಣಿನ ಸೆಳೆತವು ಒತ್ತಡ, ಆಲ್ಕೋಹಾಲ್, ದಣಿವು, ಅಲರ್ಜಿಗಳು, ಕಾರಣದಿಂದ ಬರುತ್ತದೆ.
ಸಂಜೆ ಕಸ ಗುಡಿಸುವುದು
ಲಕ್ಷ್ಮಿ ದೇವಿಯು ಮನೆಯಿಂದ ಹೊರನಡೆಯುತ್ತಾಳೆ ಎಂದು ಜನರು ನಂಬುವ ಕಾರಣ ಸೂರ್ಯಾಸ್ತದ ನಂತರ ಗುಡಿಸುವುದು ಅಶುಭವೆಂದು ಪರಿಗಣಿಸಲಾಗಿದೆ. ಸೂರ್ಯಾಸ್ತದ ನಂತರ ದೇವಿಯು ಮನೆಗೆ ಬರುತ್ತಾಳೆ. ಹೀಗಾಗಿ ಸೂರ್ಯಾಸ್ತದ ನಂತರ ಮನೆಯನ್ನು ಗುಡಿಸಿದರೆ ಅವಳು ಒಳಗೆ ಬರುವುದಿಲ್ಲ ಎಂದೇ ನಂಬಲಾಗಿದೆ.
ಉಡುಗೊರೆ ಹಣದಲ್ಲಿ ಹೆಚ್ಚುವರಿ ಒಂದು ರೂಪಾಯಿ
ಭಾರತೀಯರು ಹಣದ ರೂಪದಲ್ಲಿ ಉಡುಗೊರೆ ನೀಡಿದ್ರೆ, ಅದರಲ್ಲಿ 101 ಅಥವಾ 1,001 ರೂ.ಗಳನ್ನು ನೀಡುತ್ತಾರೆಯೇ ಹೊರತು 100 ಅಥವಾ 1,000 ರೂ. ಹಣ ನೀಡುವುದಿಲ್ಲ. ಹೆಚ್ಚುವರಿ ಒಂದು ರೂಪಾಯಿ ನಾಣ್ಯವನ್ನು ಋಣಭಾರವೆಂದು ಪರಿಗಣಿಸಲಾಗುತ್ತದೆ. ಅದು ಹಣವನ್ನು ಸ್ವೀಕರಿಸುವವರ ಮೇಲೆ ಇರುತ್ತದೆ.
ಶನಿವಾರದಂದು ಉಗುರುಗಳು ಮತ್ತು ಕೂದಲನ್ನು ಕತ್ತರಿಸುವುದು
ಶನಿವಾರದಂದು ಉಗುರುಗಳು ಮತ್ತು ಕೂದಲನ್ನು ಕತ್ತರಿಸುವುದು ದುರದೃಷ್ಟವನ್ನು ತರುತ್ತದೆ ಎಂದು ಜನರು ಭಾವಿಸುತ್ತಾರೆ. ಹೀಗಾಗಿ ಈ ದಿನ ಉಗುರು ಹಾಗೂ ಕೂದಲನ್ನು ಕತ್ತರಿಸಲು ಆಸ್ತಿಕರು ಹಿಂದೇಟು ಹಾಕುತ್ತಾರೆ.
ಕಾಗೆ ಹಿಕ್ಕೆ
ಕಾಗೆ ಹಿಕ್ಕೆ ಅದೃಷ್ಟವನ್ನು ತರುತ್ತದೆ ಎಂದು ನಂಬಲಾಗಿದೆ. ಇದರಿಂದ ಮನೆಗೆ ಒಳ್ಳೆದಾಗಿ ಹಣದ ಹೊಳೆ ಹರಿಯುತ್ತದೆ ಅನ್ನೋದು ಭಾರತೀಯರ ನಂಬಿಕೆಯಾಗಿದೆ.
ನಿಂಬೆ ಮತ್ತು 7 ಹಸಿರು ಮೆಣಸಿನಕಾಯಿಗಳು
ಸಾಮಾನ್ಯವಾಗಿ ಅಂಗಡಿಗಳಲ್ಲಿ ಮಾಲೀಕರು ತಮ್ಮ ಬಾಗಿಲಲ್ಲಿ ನಿಂಬೆ ಮತ್ತು 7 ಹಸಿರು ಮೆಣಸಿನಕಾಯಿಗಳನ್ನು ನೇತುಹಾಕುತ್ತಾರೆ. ಇದರಿಂದ ದುರದೃಷ್ಟದ ದೇವತೆಯಾದ ಅಲಕ್ಷ್ಮಿಯು ತನ್ನ ನೆಚ್ಚಿನ ಆಮ್ಲೀಯ ಆಹಾರವನ್ನು ತಿನ್ನುತ್ತಾಳೆ. ಇದರಿಂದ ಅವಳು ಹಸಿವನ್ನು ಪೂರೈಸಿಕೊಂಡು, ಅಂಗಡಿಯನ್ನು ಪ್ರವೇಶಿಸದೆ ಹೊರಟು ಹೋಗುತ್ತಾಳೆ ಎಂಬುದು ನಂಬಿಕೆಯಾಗಿದೆ.