ಉತ್ತರಾಖಂಡದ ಪೌರಿ ಗಡವಾಲ್ ಜಿಲ್ಲೆಯ ಭೋಗ್ಪುರದ ವನತಾರಾ ರೆಸಾರ್ಟ್ ನಲ್ಲಿ ನಡೆದಿದ್ದ ಸ್ವಾಗತಕಾರಿಣಿ ಅಂಕಿತ ಭಂಡಾರಿ ಕೊಲೆ ಪ್ರಕರಣಕ್ಕೆ ಈಗ ಬಿಗ್ ಟ್ವಿಸ್ಟ್ ಸಿಕ್ಕಿದೆ. ಬಿಜೆಪಿ ನಾಯಕ ವಿನೋದ್ ಆರ್ಯ ಪುತ್ರ ಲಿಖಿತ್ ಆರ್ಯ ಒಡೆತನದಲ್ಲಿದ್ದ ಈ ರೆಸಾರ್ಟ್ ನಲ್ಲಿ ವೇಶ್ಯಾವಾಟಿಕೆ ನಡೆಯುತ್ತಿತ್ತು ಎಂದು ಹೇಳಲಾಗಿದ್ದು, ಅತಿಥಿಗಳೊಂದಿಗೆ ಲೈಂಗಿಕ ಕ್ರಿಯೆ ನಡೆಸಲು ಸ್ವಾಗತಕಾರಿಣಿ ಒಪ್ಪದ ಹಿನ್ನೆಲೆಯಲ್ಲಿ ಈ ಕೊಲೆ ನಡೆದಿದೆ ಎಂದು ಮೂಲಗಳು ತಿಳಿಸಿವೆ.
ಕೊಲೆಗೆ ಸಂಬಂಧಿಸಿದಂತೆ ಈಗಾಗಲೇ ರೆಸಾರ್ಟ್ ಮಾಲೀಕ ಪುಲ್ಕಿತ್ ಆರ್ಯ, ಮ್ಯಾನೇಜರ್ ಸೌರಭ್ ಭಾಸ್ಕರ್ ಹಾಗೂ ಉದ್ಯೋಗಿ ಅಂಕಿತ್ ಗುಪ್ತ ಎಂಬವರನ್ನು ಪೊಲೀಸರು ಬಂಧಿಸಿದ್ದು, ವಿಚಾರಣೆ ವೇಳೆ ತಪ್ಪೊಪ್ಪಿಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಅತಿಥಿಗಳೊಂದಿಗೆ ಲೈಂಗಿಕ ಕ್ರಿಯೆ ನಡೆಸಲು ಅಂಕಿತ ಒಪ್ಪದಿದ್ದಾಗ ಆಕೆಯನ್ನು ಕಾರಿನಲ್ಲಿ ಕರೆದುಕೊಂಡು ಹೋಗಿದ್ದ ಇವರುಗಳು ಬೆದರಿಕೆ ಹಾಕಿದ್ದಾರೆ. ಬಳಿಕ ಕೋಪದ ಭರದಲ್ಲಿ ಪುಲ್ಕಿತ್ ಆಕೆಯನ್ನು ನಾಲೆಗೆ ತಳ್ಳಿದ್ದ ಎಂದು ಹೇಳಲಾಗಿದೆ.
ತನ್ನನ್ನು ರಕ್ಷಿಸುವಂತೆ ಅಂಕಿತಾ ಅಂಗಲಾಚಿ ಬೇಡಿಕೊಂಡರು ಆರೋಪಿಗಳು ಅದನ್ನು ನಿರ್ಲಕ್ಷಿಸಿ ರೆಸಾರ್ಟ್ ಗೆ ಮರಳಿ ಬಂದಿದ್ದಾರೆ. ಬಳಿಕ ಪುಲ್ಕಿತ್ ಸ್ವತಃ ತಾನೇ ಠಾಣೆಗೆ ಹೋಗಿ ಅಂಕಿತಾ ನಾಪತ್ತೆಯಾಗಿರುವ ಕುರಿತು ಪೊಲೀಸರಿಗೆ ಮಾಹಿತಿ ನೀಡಿದ್ದ ಎನ್ನಲಾಗಿದೆ. ಆದರೆ ಪೊಲೀಸರಿಗೆ ಈತನ ಕೈವಾಡ ಇರಬಹುದು ಎಂದು ಅನುಮಾನ ಮೂಡಿದ್ದು, ಘಟನೆ ನಡೆಯುವ ಮುನ್ನ ತನ್ನ ಸ್ನೇಹಿತರಿಗೆ ಕರೆ ಮಾಡಿದ್ದ ಅಂಕಿತಾ ತನಗೆ ಅತಿಥಿಗಳೊಂದಿಗೆ ಲೈಂಗಿಕ ಕ್ರಿಯೆ ನಡೆಸಲು ಒತ್ತಾಯಿಸುತ್ತಿರುವ ಕುರಿತು ಹೇಳಿಕೊಂಡಿದ್ದಳು ಎನ್ನಲಾಗಿದೆ. ಈ ವಿಚಾರ ತಿಳಿದ ಪೊಲೀಸರು ಪುಲ್ಕಿತ್ ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಸಂಪೂರ್ಣ ಕೃತ್ಯ ಬಹಿರಂಗವಾಗಿದೆ.