
ಐಸ್‌ಕ್ರೀಮ್ ಮತ್ತು ಆಲೂಗಡ್ಡೆ ಚಿಪ್ಸ್ ಎಲ್ಲಾ ವಯಸ್ಸಿನವರೂ ಇಷ್ಟಪಡುವಂತಹ ತಿನಿಸು. ಕೆಲವರಿಗೆ ಐಸ್ ಕ್ರೀಂ ಎಷ್ಟು ಫೇವರಿಟ್ ಅಂದ್ರೆ ಚಳಿಗಾಲದಲ್ಲೂ ಅದನ್ನು ಸೇವಿಸ್ತಾರೆ. ಆಲೂಗಡ್ಡೆ ಚಿಪ್ಸ್ ಅನ್ನು ಯಾವ ಸಮಯದಲ್ಲಿ ಬೇಕಾದರೂ ತಿಂತಾರೆ.
ಸಂಶೋಧನೆಯ ಪ್ರಕಾರ ಐಸ್ ಕ್ರೀಮ್ ಮತ್ತು ಆಲೂಗಡ್ಡೆ ಚಿಪ್ಸ್ ಸೇವನೆ ಈಗ ಚಟವಾಗಿ ಮಾರ್ಪಟ್ಟಿದೆ. ಜನರು ಈಗ ನಿಕೋಟಿನ್ ಮತ್ತು ಕೊಕೇನ್‌ನಂತೆ ಚಿಪ್ಸ್ ಹಾಗೂ ಐಸ್‌ಕ್ರೀಮ್‌ಗೆ ವ್ಯಸನಿಯಾಗಿದ್ದಾರೆ. ಅಲ್ಟ್ರಾ ಸಂಸ್ಕರಿತ ಈ ಆಹಾರಗಳು 10ರಲ್ಲಿ ಒಬ್ಬರನ್ನು ವ್ಯಸನಿಯಾಗಿ ಮಾಡ್ತಿದೆ. ಇವುಗಳಲ್ಲಿ ಹೆಚ್ಚಿನ ಪ್ರಮಾಣದ ಕಾರ್ಬೋಹೈಡ್ರೇಟ್‌ಗಳು ಮತ್ತು ಕೊಬ್ಬು ಇರುತ್ತದೆ. ಅದಕ್ಕಾಗಿಯೇ ಅವು ಚಟವಾಗಿಬಿಡುತ್ತವೆ. ಅವುಗಳನ್ನು ಜನರು ಮತ್ತೆ ಮತ್ತೆ ತಿನ್ನುತ್ತಾರೆ.
ಸಂಶೋಧನೆಯ ಪ್ರಕಾರ ಐಸ್ ಕ್ರೀಮ್ ಮತ್ತು ಆಲೂಗಡ್ಡೆ ಚಿಪ್ಸ್‌ನಿಂದ ದೂರವಿರುವುದು ಸ್ವಲ್ಪ ಕಷ್ಟ. ಆದರೆ ಕ್ರಮೇಣ ಅವುಗಳ ಸೇವನೆಯನ್ನು ಕಡಿಮೆ ಮಾಡಬೇಕು. ಇಲ್ಲದಿದ್ದರೆ ಅದು ತೂಕ ಹೆಚ್ಚಳ ಮತ್ತು ಮಧುಮೇಹದ ಅಪಾಯವನ್ನು ಹೆಚ್ಚಿಸುತ್ತದೆ. ಇದಲ್ಲದೇ ಹೃದಯದ ಸಮಸ್ಯೆ, ಕೊಲೆಸ್ಟ್ರಾಲ್, ರಕ್ತದೊತ್ತಡ, ಹಲ್ಲುಗಳಿಗೆ ಹಾನಿ ಇತ್ಯಾದಿ ಸಮಸ್ಯೆಗಳು ಬರಲಾರಂಭಿಸುತ್ತವೆ. ಸಾಂದರ್ಭಿಕವಾಗಿ ಸ್ವಲ್ಪ ಪ್ರಮಾಣದ ಐಸ್ ಕ್ರೀಮ್ ಅಥವಾ ಚಿಪ್ಸ್ ತಿನ್ನಬಹುದು, ಆದರೆ ದಿನನಿತ್ಯದ ಸೇವನೆಯು ದೇಹಕ್ಕೆ ಅಪಾಯಕಾರಿ.
ಐಸ್ ಕ್ರೀಮ್ ಮತ್ತು ಆಲೂಗಡ್ಡೆ ಚಿಪ್ಸ್ ಅನ್ನು ಸಂಪೂರ್ಣವಾಗಿ ತ್ಯಜಿಸುವುದು ತುಂಬಾ ಕಷ್ಟ. ಆದರೆ ಚಿಪ್ಸ್ ತಿನ್ನಬೇಕೆಂದು ಅನಿಸಿದಾಗ ಹುರಿದ ಕಡಲೆಕಾಯಿ ಅಥವಾ ಮಖಾನಾವನ್ನು ತಿನ್ನಬಹುದು. ಐಸ್ ಕ್ರೀಮ್ ಬದಲು ಮೊಸರನ್ನು ಸೇವಿಸಬಹುದು. ಚಿಪ್ಸ್‌ನ ಸಂಪೂರ್ಣ ಪ್ಯಾಕೆಟ್ ಅನ್ನು ಒಂದೇ ಬಾರಿಗೆ ತಿನ್ನುವುದನ್ನು ತಪ್ಪಿಸಿ, ಬಟ್ಟಲಲ್ಲಿ ನಾಲ್ಕಾರು ಚಿಪ್ಸ್ ಹಾಕಿಕೊಂಡು ತಿನ್ನಿ. ಚಿಪ್ಸ್ ಪ್ಯಾಕೆಟ್‌ಗಳನ್ನು ಮನೆಗೆ ತರದೇ ಇರುವುದು ಉತ್ತಮ.