ಹೋಟೆಲ್ ಗೆ ಹೋದ್ರೆ ನಾವು ನಾನ್, ರೋಟಿ, ಕುಲ್ಚಾ ಹೀಗೆ ವೆರೈಟಿ ವೆರೈಟಿ ತಿನಿಸುಗಳನ್ನು ಟೇಸ್ಟ್ ಮಾಡ್ತೀವಿ. ಇವನ್ನೆಲ್ಲ ಮನೆಯಲ್ಲೂ ಮಾಡಬಹುದು. ಹೋಮ್ ಮೇಡ್ ಬಟರ್ ನಾನ್ ಅಂತೂ ಬಾಯಲ್ಲಿ ನೀರೂರಿಸುತ್ತೆ.
ಪನೀರ್ ಕರಿ, ಅಥವಾ ಯಾವುದೇ ಉತ್ತರ ಭಾರತದ ಗ್ರೇವಿ ಜೊತೆಗೆ ಇದನ್ನು ಸರ್ವ್ ಮಾಡಬಹುದು.
ಬೇಕಾಗುವ ಸಾಮಗ್ರಿ : 2 ಕಪ್ ಮೈದಾ, 1 ಚಮಚ ಸಕ್ಕರೆ, 1 ಚಮಚ ಬೇಕಿಂಗ್ ಪೌಡರ್, ಕಾಲು ಚಮಚ ಬೇಕಿಂಗ್ ಸೋಡಾ, ರುಚಿಗೆ ತಕ್ಕಷ್ಟು ಉಪ್ಪು, ಕಾಲು ಕಪ್ ತಾಜಾ ಮೊಸರು, 2 ಚಮಚ ಎಣ್ಣೆ, ಅಗತ್ಯಕ್ಕೆ ತಕ್ಕಷ್ಟು ಉಗುರು ಬೆಚ್ಚಗಿನ ನೀರು, 2 ಚಮಚ ಬೆಣ್ಣೆ, ಹೆಚ್ಚಿದ ಕೊತ್ತಂಬರಿ ಸೊಪ್ಪು.
ತಯಾರಿಸುವ ವಿಧಾನ : ಒಂದು ಬೌಲ್ ನಲ್ಲಿ ಮೈದಾ, ಸಕ್ಕರೆ, ಬೇಕಿಂಗ್ ಪೌಡರ್, ಬೇಕಿಂಗ್ ಸೋಡಾ, ಉಪ್ಪು, ಮೊಸರು, ಎಣ್ಣೆ ಹಾಕಿಕೊಂಡು ಚೆನ್ನಾಗಿ ಮಿಕ್ಸ್ ಮಾಡಿ. ನಂತರ ಉಗುರು ಬೆಚ್ಚಗಿನ ನೀರು ಸೇರಿಸಿ ಮೃದುವಾದ ಚಪಾತಿ ಹಿಟ್ಟಿನ ಹದಕ್ಕೆ ಕಲೆಸಿಕೊಳ್ಳಿ. ಒದ್ದೆ ಬಟ್ಟೆಯನ್ನು ಮುಚ್ಚಿ 2 ಗಂಟೆ ಹಾಗೇ ಬಿಡಿ. ಒಂದು ಚಿಕ್ಕ ಬೌಲ್ ನಲ್ಲಿ ಬೆಣ್ಣೆ ಮತ್ತು ಕತ್ತರಿಸಿದ ಕೊತ್ತಂಬರಿ ಸೊಪ್ಪನ್ನು ಹಾಕಿ ಮಿಕ್ಸ್ ಮಾಡಿಟ್ಟುಕೊಳ್ಳಿ.
2 ಗಂಟೆಗಳ ಬಳಿಕ ಕಲಸಿಟ್ಟ ಹಿಟ್ಟನ್ನು ತೆಗೆದುಕೊಂಡು ಚೆನ್ನಾಗಿ ನಾದಿ. ಚೆಂಡಿನ ಗಾತ್ರದ ಉಂಡೆಗಳನ್ನು ಮಾಡಿಕೊಳ್ಳಿ. ಹುಡಿ ಹಿಟ್ಟನ್ನು ತೆಗೆದುಕೊಂಡು ನಿಮಗೆ ಬೇಕಾದ ಆಕಾರಕ್ಕೆ ಸ್ವಲ್ಪ ದಪ್ಪಗೆ ಲಟ್ಟಿಸಿ. ಲಟ್ಟಿಸಿದ ನಾನ್ ಮೇಲೆ ಸ್ವಲ್ಪ ನೀರು ಹಚ್ಚಿ ಕಾದ ತವಾ ಮೇಲೆ ಹಾಕಿ. ನಾನ್ ಹೊಂಬಣ್ಣಕ್ಕೆ ಬರುವವರೆಗೆ ಬೇಯಿಸಿ, ಬೆಣ್ಣೆ ಮತ್ತು ಕೊತ್ತಂಬರಿ ಸೊಪ್ಪಿನ ಮಿಶ್ರಣವನ್ನು ಹಾಕಿ ಅಲಂಕರಿಸಿ. ಹೋಮ್ ಮೇಡ್ ಬಟರ್ ನಾನ್ ಸವಿಯಲು ಸಿದ್ಧ.