ನಾಯಿ ಮತ್ತು ಮನುಷ್ಯ ಪ್ರೀತಿಯನ್ನು ಅನಾವರಣಗೊಳಿಸಿರುವ ʼ777 ಚಾರ್ಲಿʼ ಕನ್ನಡ ಚಲನಚಿತ್ರವನ್ನು ವೀಕ್ಷಿಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಮ್ಮ ಮನೆಯಲ್ಲಿದ್ದ ಪ್ರೀತಿಯ ನಾಯಿ ‘ಸನ್ನಿ’ಯನ್ನು ನೆನಪಿಸಿಕೊಂಡು ಭಾವುಕರಾದರು. ದುಃಖ ತಡೆಯಲಾಗದೇ ಕಣ್ಣೀರು ಹಾಕಿದರು.
ಮನುಷ್ಯ ಮತ್ತು ನಾಯಿಯ ನಡುವಿನ ಪ್ರೀತಿ, ಯಾವುದೇ ಕಟ್ಟುಪಾಡಿಲ್ಲದ (unconditional) ಪ್ರೀತಿಗೆ ಉತ್ತಮ ಉದಾಹರಣೆ. ಅತ್ಯಂತ ಪರಿಶುದ್ಧ ಪ್ರೀತಿ ಇದು ಎಂದು ಮುಖ್ಯಮಂತ್ರಿಗಳು ಗದ್ಗದಿತರಾಗಿ ನುಡಿದರು. ನಾಯಕನಟ ರಕ್ಷಿತ್ ಶೆಟ್ಟಿ ಮನೋಜ್ಞ ವಾಗಿ ನಟಿಸಿದ್ದಾರೆ ಎಂದು ಹೇಳಿದ ಅವರು, ಈಗ ನಾನು ಮನೆಯಲ್ಲಿ ಹೆಣ್ಣುನಾಯಿ `ಟಿಯಾ’ಳನ್ನು ಸಾಕುತ್ತಿರುವುದಾಗಿ ಅವರು ತಿಳಿಸಿದರು.
ಈ ಸಿನಿಮಾ ನೋಡಲು ಜನರ ದಟ್ಟಣೆ ನೋಡಿದಾಗ ಪ್ರಾಣಿ ಮತ್ತು ಮನುಷ್ಯ ನ ಸಂಬಂಧವಿರುವ ಚಿತ್ರ ನೋಡಬೇಕು ಎಂದೆನಿಸಿತ್ತು. ರಕ್ಷಿತ್ ಅವರೂ ಚಿತ್ರ ವೀಕ್ಷಿಸಬೇಕೆಂದು ಕರೆದಿದ್ದರು. ಹಾಗಾಗಿ ಚಿತ್ರ ನೋಡಿದಂತಾಯಿತು ಎಂದರು.
ಮನುಷ್ಯ ಮತ್ತು ಪ್ರಾಣಿಗಳ ಸಂಬಂಧ ಅದರಲ್ಲಿಯೂ ನಾಯಿ, ಮನುಷ್ಯನನ್ನು ಅತ್ಯಂತ ಪ್ರೀತಿಸುವ ಪ್ರಾಣಿ. ಮನುಷ್ಯನೂ ನಾಯಿಯನ್ನು ಪ್ರೀತಿಸುತ್ತಾನೆ. ಸಂಬಂಧಗಳನ್ನು ಮಾರ್ಮಿಕ ಮತ್ತು ಸೂಕ್ಷ್ಮವಾಗಿ ಭಾವನಾತ್ಮಕವಾಗಿ ತೆಗೆದಿದ್ದಾರೆ ಚಿತ್ರದ ನಿರ್ದೇಶಕರು ಎಂದರು.
ತಜ್ಞರೊಂದಿಗೆ ಚರ್ಚಿಸಿ ಬೀದಿನಾಯಿಗಳನ್ನು ಸೂಕ್ತ ರೀತಿಯಲ್ಲಿ ನೋಡಿಕೊಳ್ಳಲು ತಜ್ಞರೊಂದಿಗೆ ಚರ್ಚಿಸಿ ಕ್ರಮಗಳನ್ನು ತೆಗೆದುಕೊಳ್ಳುವ ಬಗ್ಗೆ ತೀರ್ಮಾನಿಸಲಾಗುವುದು ಎಂದು ತಿಳಿಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ನಾಯಿಗಳಿಗೆ ತರಬೇತಿ ನೀಡುವವರಿಗೆ ಪ್ರೋತ್ಸಾಹ ನೀಡುವ ವಿಶೇಷ ಕಾರ್ಯಕ್ರಮ ರೂಪಿಸುವ ಚಿಂತನೆ ಇದೆ. ಬೀದಿನಾಯಿಗಳನ್ನು ದತ್ತು ತೆಗೆದುಕೊಳ್ಳಬೇಕು. ಪ್ರಾಣಿಗಳನ್ನು ಹಿಂಸಿಸಬಾರರು. ಬೀದಿನಾಯಿಗಳನ್ನು ಹಾಗೂ ಇತರೆ ಪ್ರಾಣಿಗಳನ್ನು ರಕ್ಷಿಸಬೇಕು ಹಾಗೂ ಸಾಧ್ಯವಾದರೆ ದತ್ತು ಪಡೆಯಬೇಕು ಎಂದು ಸಾರ್ವಜನಿಕರಿಗೆ ಕರೆ ನೀಡಿದರು.