alex Certify ʼ30 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಯುಪಿಯ ಎಲ್ಲಾ 403 ಕ್ಷೇತ್ರಗಳಲ್ಲಿ ಕಣಕ್ಕಿಳಿದ ಕಾಂಗ್ರೆಸ್ʼ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ʼ30 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಯುಪಿಯ ಎಲ್ಲಾ 403 ಕ್ಷೇತ್ರಗಳಲ್ಲಿ ಕಣಕ್ಕಿಳಿದ ಕಾಂಗ್ರೆಸ್ʼ

ದೆಹಲಿ: 2022ರ ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಗೆ ಇನ್ನು ಕೆಲವೇ ದಿನಗಳು ಬಾಕಿಯಿದ್ದು, ರಾಜಕೀಯ ಪಕ್ಷಗಳು ಅಂತಿಮ ಸಮರಕ್ಕೆ ಸಜ್ಜಾಗುತ್ತಿವೆ. ಕಾಂಗ್ರೆಸ್ ಪಾಲಿಗೆ ಈ ಚುನಾವಣೆ ವಿಶೇಷ ಮಹತ್ವ ಪಡೆದಿದೆ. ಯುಪಿಯಲ್ಲಿ ದಶಕಗಳಿಂದ ಕಾಂಗ್ರೆಸ್ ಅಧಿಕಾರಕ್ಕೆ ಏರಿಲ್ಲವಾದ್ರೂ, 30 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಪಕ್ಷವು ಎಲ್ಲಾ 403 ಸ್ಥಾನಗಳಲ್ಲಿ ಸ್ಪರ್ಧಿಸುತ್ತಿರುವುದು ವಿಶೇಷವಾಗಿದೆ.

ಈ ಕುರಿತು ಮಾತನಾಡಿದ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ, ನಾವು ನಮ್ಮ ಶಕ್ತಿಯಿಂದ ಹೋರಾಡುತ್ತಿದ್ದೇವೆ. 30 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ನಮ್ಮ ಪಕ್ಷವು ಎಲ್ಲಾ 403 ಸ್ಥಾನಗಳಲ್ಲಿ ಸ್ಪರ್ಧಿಸುತ್ತಿದೆ ಎಂದು ತಿಳಿಸಿದ್ದಾರೆ.

ಫೆಬ್ರವರಿ 4ರ ಶುಕ್ರವಾರದಂದು ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಗಾಜಿಯಾಬಾದ್‌ನ ಸಾಹಿಬಾಬಾದ್‌ನಲ್ಲಿ ರೋಡ್‌ಶೋ ನಡೆಸಿದ್ದಾರೆ. ಹೃದಯಾಘಾತದಿಂದ ಆಗಸ್ಟ್ 2020 ರಲ್ಲಿ ನಿಧನರಾದ ಕಾಂಗ್ರೆಸ್ ನಾಯಕ ದಿವಂಗತ ರಾಜೀವ್ ತ್ಯಾಗಿ ಅವರ ಪತ್ನಿ ಸಂಗೀತಾ ತ್ಯಾಗಿ ಅವರು ಈ ಪ್ರದೇಶದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ. ಅವರ ಪರವಾಗಿ ಪ್ರಿಯಾಂಕಾ ಗಾಂಧಿ ವಾದ್ರಾ ಮತಬೇಟೆ ನಡೆಸಿದ್ದಾರೆ.

ಅಂದಹಾಗೆ, ಗುರುವಾರದಂದು ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಬುಲಂದ್‌ಶಹರ್‌ನಲ್ಲಿರುವಾಗ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ತಮ್ಮ ಪಕ್ಷದ ಅಭ್ಯರ್ಥಿಗಳಿಗೆ ಜನರ ಬೆಂಬಲವನ್ನು ಕೋರಿದ್ದಾರೆ. ಚುನಾವಣೆಗಳು ಅಭಿವೃದ್ಧಿಯ ವಿಷಯದ ಮುಖಾಂತರವಾಗಿ ಹೋರಾಡಬೇಕು ಮತ್ತು ಯಾವುದೇ ಜಾತಿ, ಧರ್ಮದ ವಿರುದ್ಧವಾಗಿ ಅಲ್ಲ ಎಂಬುದಾಗಿ ಒತ್ತಿ ಹೇಳಿದ್ದಾರೆ.

ಅಲ್ಲಿನ ಹಳ್ಳಿಯೊಂದರಲ್ಲಿ ಗುಂಡಿಗೆ ಬಲಿಯಾದ ಮಹಿಳೆಯ ಕುಟುಂಬ ಸದಸ್ಯರನ್ನೂ ಪ್ರಿಯಾಂಕಾ ಗಾಂಧಿ ಭೇಟಿಯಾಗಿ, ಸಾಂತ್ವಾನ ಹೇಳಿದ್ದಾರೆ. ಮಹಿಳೆಯ ಹತ್ಯೆಗೂ ಮುನ್ನ ಆಕೆಯ ಮೇಲೆ ಅತ್ಯಾಚಾರ ಎಸಗಲಾಗಿತ್ತು. ಹಾಗೂ ಅವಸರದಲ್ಲಿ ಶವಸಂಸ್ಕಾರ ಮಾಡುವಂತೆ ಒತ್ತಾಯಿಸಲಾಯಿತು ಎಂಬುದಾಗಿ ಆಕೆಯ ಕುಟುಂಬ ಆರೋಪಿಸಿದೆ. ನ್ಯಾಯಕ್ಕಾಗಿ ತಮ್ಮಿಂದ ಸಾಧ್ಯವಿರುವ ಎಲ್ಲ ಸಹಾಯವನ್ನು ಮಾಡುವುದಾಗಿ ಪ್ರಿಯಾಂಕಾ ಮೃತ ಮಹಿಳೆಯ ಕುಟುಂಬಕ್ಕೆ ಭರವಸೆ ನೀಡಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...