ಹೆಸರು ಬೇಳೆ ನೈಸರ್ಗಿಕವಾಗಿ ಸಮೃದ್ಧವಾದ ಪ್ರೋಟೀನ್ ಹೊಂದಿದೆ. ಇದರಿಂದ ತಯಾರಿಸುವ ಪ್ರತಿ ತಿಂಡಿ ಆರೋಗ್ಯ ಪೂರ್ಣ. ಅದರಲ್ಲೂ ಹೆಸರು ಬೇಳೆ ಹಲ್ವಾದ ರುಚಿನೇ ಬೇರೆ. ಯಾಕೆಂದರೆ ಇದರಲ್ಲಿ ತುಪ್ಪ, ಸಕ್ಕರೆ, ಒಣ ಹಣ್ಣುಗಳ ಮಿಶ್ರಣ ಇರುವುದರಿಂದ ಇದನ್ನು ಸವಿಯಲು ಖುಷಿ ಆಗುತ್ತದೆ. ಹಾಗಾದರೆ ಈ ಹಲ್ವಾ ತಯಾರಿಸುವುದು ಹೇಗೆ ತಿಳಿಯೋಣ.
ಬೇಕಾಗುವ ಸಾಮಾಗ್ರಿಗಳು
ಹಳದಿ ಬಣ್ಣದ ಹೆಸರುಬೇಳೆ – 1 ಕಪ್
ನೀರು-1/2 ಕಪ್
ತುಪ್ಪ- 3/4 ಕಪ್
ಸಕ್ಕರೆ -1 ಕಪ್
ಏಲಕ್ಕಿ ಪುಡಿ – ಒಂದು ಚಿಟಕಿ
ಹೆಚ್ಚಿದ ಬಾದಾಮಿ 3-4 (ಅಲಂಕಾರಕ್ಕೆ)
ಕೇಸರಿ ಎಳೆ 3-4 (ಅಲಂಕಾರಕ್ಕೆ)
ಮಾಡುವ ವಿಧಾನ
ಒಂದು ಪಾತ್ರೆಯಲ್ಲಿ ಹೆಸರು ಬೇಳೆಯನ್ನು ಹಾಕಿ 3-4 ಗಂಟೆಗಳ ಕಾಲ ನೀರಿನಲ್ಲಿ ನೆನೆಯಲು ಬಿಡಿ. ನೆನೆದ ಬೇಳೆಯನ್ನು ಮಿಕ್ಸರ್ ಗೆ ಹಾಕಿ ಜೊತೆಗೆ ಒಂದು ಚಮಚ ನೀರನ್ನು ಬೆರೆಸಿ ನುಣುಪಾಗಿ ರುಬ್ಬಿಕೊಳ್ಳಬೇಕು.
ನಂತರ ಒಂದು ಪಾತ್ರೆಯಲ್ಲಿ ರುಬ್ಬಿಕೊಂಡ ಪೇಸ್ಟ್ ಮತ್ತು 1/2 ಕಪ್ ತುಪ್ಪವನ್ನು ಹಾಕಿ ಸಾಧಾರಣ ಉರಿಯಲ್ಲಿ ಬೇಯಿಸಬೇಕು. ಮಿಶ್ರಣ ಗಂಟು-ಗಂಟಾಗದಂತೆ ನಿರಂತರವಾಗಿ ಕೈ ಆಡಿಸುತ್ತಲೇ ಇರಬೇಕು.
ಮಿಶ್ರಣ ಹೊಂಬಣ್ಣಕ್ಕೆ ತಿರುಗಿದ ನಂತರ 1/4 ಕಪ್‍ನಷ್ಟು ತುಪ್ಪವನ್ನು ಹಾಕಿ ಕೈ ಆಡಿಸುತ್ತ ಇರಿ. ತುಪ್ಪ ಮಿಶ್ರಣದಿಂದ ಹೊರಬರಲು ಪ್ರಾರಂಭಿಸಿದಾಗ ಉರಿಯನ್ನು ಕಡಿಮೆ ಮಾಡಿ ಬೇಯಿಸುವುದನ್ನು ಮುಂದುವರಿಸಬೇಕು.
ಈ ಸಮಯದಲ್ಲೇ ಒಂದು ಪಾತ್ರೆಯಲ್ಲಿ ಸಕ್ಕರೆಯನ್ನು ಹಾಕಿ, ಅದು ಮುಳುಗುವಷ್ಟು ನೀರನ್ನು ಹಾಕಿ ಪಾಕ ತಯಾರಿಸಿಕೊಳ್ಳಬೇಕು.
ತಯಾರಾದ ಪಾಕವನ್ನು ದಾಲ್ ಮಿಶ್ರಣಕ್ಕೆ ಸೇರಿಸಿ ಚೆನ್ನಾಗಿ ಬೆರೆತು ಕೊಳ್ಳುವಂತೆ ಕೈ ಆಡಿಸಿ. ಸ್ವಲ್ಪ ಸಮಯದಲ್ಲೇ ಹಲ್ವಾ ಪಾತ್ರೆಯ ಬದಿಯಲ್ಲಿ ಬಿಟ್ಟುಕೊಳ್ಳಲು ಪ್ರಾರಂಭವಾಗುತ್ತದೆ. ಆಗ ಏಲಕ್ಕಿ ಪುಡಿಯನ್ನು ಹಾಕಿ ಚೆನ್ನಾಗಿ ಕಲಕಿ. ನಂತರ ಹೆಚ್ಚಿಕೊಂಡ ಬಾದಾಮಿ ಚೂರು ಹಾಗೂ ಕೇಸರಿ ಎಳೆಯಿಂದ ಅಲಂಕಾರಗೊಳಿಸಿ ಸವಿಯಲು ನೀಡಿ.