ಟಿಬೆಟಿಯನ್ ಧರ್ಮಗುರು ದಲೈಲಾಮಾ ಚೀನಾವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಚೀನಾದ ರಾಜಕೀಯ ನಿಲುವನ್ನು ಅವರು ಖಂಡಿಸಿದ್ದಾರೆ, ಅಷ್ಟೇ ಅಲ್ಲ ಭಾರತದ ಬಗ್ಗೆ ತಮಗಿರೋ ಅಭಿಮಾನವನ್ನು ಬಹಿರಂಗವಾಗಿಯೇ ವ್ಯಕ್ತಪಡಿಸಿದ್ದಾರೆ.
ಚೀನಾದಂತಹ ‘ಕೃತಕ’ ದೇಶದಲ್ಲಿ ಸಾಯುವ ಬದಲು ಮುಕ್ತ ಮತ್ತು ಪ್ರಜಾಪ್ರಭುತ್ವ ರಾಷ್ಟ್ರ ಭಾರತದಲ್ಲಿ ಸಾಯಲು ನಾನು ಇಷ್ಟಪಡುತ್ತೇನೆ ಅಂತಾ ದಲೈಲಾಮಾ ಹೇಳಿದ್ದಾರೆ.
ಯುನೈಟೆಡ್ ಸ್ಟೇಟ್ಸ್ ಇನ್‌ಸ್ಟಿಟ್ಯೂಟ್ ಆಫ್ ಪೀಸ್ ಆಯೋಜಿಸಿದ್ದ ಎರಡು ದಿನಗಳ ಕಾರ್ಯಕ್ರಮದಲ್ಲಿ ಅವರು ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸುತ್ತಿದ್ದರು. ಧರ್ಮಶಾಲಾದಲ್ಲಿ 13 ದೇಶಗಳ 28 ಯುವ ಶಾಂತಿನಿರ್ಮಾಪಕರೊಂದಿಗೆ ದಲೈ ಲಾಮಾ ವೈಯಕ್ತಿಕ ಸಂವಾದ ನಡೆಸಿದ್ದಾರೆ.
“ನನ್ನ ಸಮುದಾಯ ಮತ್ತು ನನ್ನ ಜೀವಕ್ಕೆ ಅಪಾಯವಿತ್ತು. ತುರ್ತು ಮತ್ತು ಹತಾಶ ಪರಿಸ್ಥಿತಿ ಅದು. ನಾನು ಟಿಬೆಟ್‌ನಿಂದ ತಪ್ಪಿಸಿಕೊಳ್ಳಲು ನಿರ್ಧರಿಸಿದೆ. ಈಗ ಭಾರತದಲ್ಲಿ ನಿರಾಶ್ರಿತನಾಗಿ ನಾನು ಹೆಚ್ಚು ಸಂತೋಷವಾಗಿದ್ದೇನೆ. ಭಾರತದೊಂದಿಗಿನ ನಮ್ಮ ಬಾಂಧವ್ಯಕ್ಕೆ ಸುದೀರ್ಘ ಇತಿಹಾಸವಿದೆ. ನಾನು ಭಾರತ ಸರ್ಕಾರದ ವಿನಮ್ರ ಅತಿಥಿಯಾಗಿದ್ದೇನೆʼʼ ಅಂತಾ ದಲೈಲಾಮಾ ತಮ್ಮ ಮನದ ಮಾತುಗಳನ್ನು ಬಿಚ್ಚಿಟ್ಟರು.
ಪ್ರಜಾಪ್ರಭುತ್ವ ಮತ್ತು ಸಮಾನತೆಗಾಗಿ ದೇಶಗಳು ಹೋರಾಡುವ ಅಗತ್ಯವನ್ನು ಒತ್ತಿ ಹೇಳಿದ ದಲೈಲಾಮಾ, “ನಾನು ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರಿಗೆ ಹೇಳಿದ್ದೆ, ನಾನು ಇನ್ನೂ 15-20 ವರ್ಷ ಬದುಕುತ್ತೇನೆ, ಅದರ ಬಗ್ಗೆ ಯಾವುದೇ ಅನುಮಾನವಿಲ್ಲ. ಭಾರತದಲ್ಲೇ ನನ್ನ ಸಾವು ಸಂಭವಿಸಬೇಕು. ಭಾರತವು ಪ್ರೀತಿಯನ್ನು ತೋರಿಸುವ ಜನರಿಂದ ಸುತ್ತುವರೆದಿದೆ, ಅದು ಕೃತಕವಲ್ಲ. ನಾನು ಚೀನಾದ ಅಧಿಕಾರಿಗಳಿಂದ ಸುತ್ತುವರೆದರೆ, ಅದು ತುಂಬಾ ಕೃತಕವಾಗಿರುತ್ತದೆ. ಸ್ವತಂತ್ರ ಪ್ರಜಾಪ್ರಭುತ್ವವಿರುವ ಈ ದೇಶದಲ್ಲಿ ಸಾಯುವುದನ್ನು ನಾನು ಇಷ್ಟಪಡುತ್ತೇನೆʼʼ ಅಂತಾ ದಲೈಲಾಮಾ ಹೇಳಿದ್ದಾರೆ.
ದಲೈಲಾಮಾ, ಚೀನಾದ ನಡೆಯನ್ನು ಖಂಡಿಸಿರುವುದು ಇದೇ ಮೊದಲೇನಲ್ಲ. ಚೀನಾದ ದುರಾಡಳಿತದ ಬಗ್ಗೆ ಮೊದಲಿನಿಂದಲೂ ಅಸಮಾಧಾನ ವ್ಯಕ್ತಪಡಿಸುತ್ತಲೇ ಬಂದಿದ್ದಾರೆ. 1950ರ ದಶಕದಲ್ಲಿ, ಚೀನಾ ಟಿಬೆಟ್ ಅನ್ನು ಆಕ್ರಮಿಸಿಕೊಂಡಾಗ ದಲೈಲಾಮಾ ಭಾರತಕ್ಕೆ ಓಡಿ ಬಂದು ಆಶ್ರಯ ಪಡೆದಿದ್ದರು.