ದಾವಣಗೆರೆಯಲ್ಲಿ ಹಮ್ಮಿಕೊಂಡಿರುವ ಸಿದ್ದರಾಮೋತ್ಸವ ಸಮಾರಂಭಕ್ಕೆ ಶಿವಮೊಗ್ಗ ಜಿಲ್ಲೆಯಿಂದಲೂ ಸಾವಿರಾರು ಸಂಖ್ಯೆಯಲ್ಲಿ ಅಭಿಮಾನಿಗಳು, ಕಾರ್ಯಕರ್ತರು ತೆರಳಿದ್ದಾರೆ.
ಸುಮಾರು 25 ಸಾವಿರಕ್ಕೂ ಹೆಚ್ಚು ಜನರು ಸಮಾರಂಭಕ್ಕೆ ತೆರಳಿದ್ದಾರೆ ಎಂದು ತಿಳಿದುಬಂದಿದೆ. ಇದಕ್ಕಾಗಿ 300 ಕ್ಕೂ ಹೆಚ್ಚು ಬಸ್ ಆಯೋಜಿಸಲಾಗಿತ್ತು. ಇನ್ನುಳಿದಂತೆ ಬಹಳಷ್ಟು ಜನರು ತಮ್ಮ ಖಾಸಗಿ ವಾಹನಗಳಲ್ಲಿ ಬೆಣ್ಣೆ ನಗರಿಯತ್ತ ಹೊರಟಿದ್ದು, ಕಂಡು ಬಂದಿತು.
ಜಿಲ್ಲಾ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ಹೆಚ್.ಎಸ್. ಸುಂದರೇಶ್ ಕಾಂಗ್ರೆಸ್ ಕಚೇರಿಯ ಮುಂದೆ ದಾವಣಗೆರೆಗೆ ಹೊರಟ ಕಾರ್ಯಕರ್ತರನ್ನು, ಅಭಿಮಾನಿಗಳನ್ನು ವಿವಿಧ ವಾಹನಗಳ ಮೂಲಕ ಸಂಭ್ರಮದಿಂದ ಬೀಳ್ಕೋಟ್ಟರು. ಈ ಸಂದರ್ಭದಲ್ಲಿ ಅವರು ಕಾಂಗ್ರೆಸ್ ಧ್ವಜವನ್ನು ಎತ್ತಿ ಹಿಡಿದು ಸಂಭ್ರಮಿಸಿದರು.
ರವೀಂದ್ರನಗರದ ದೇವಸ್ಥಾನದಲ್ಲಿ ಜಿಲ್ಲಾ ಯುವ ಕಾಂಗ್ರೆಸ್ನಿಂದ ವಿಶೇಷ ಪೂಜೆಯನ್ನು ಸಲ್ಲಿಸಿ ದಾವಣಗೆರೆಯತ್ತ ಯುವ ಕಾಂಗ್ರೆಸ್ ಕಾರ್ಯಕರ್ತರು ಘೋಷಣೆ ಕೂಗುತ್ತ ತೆರಳಿದರು.
ಕಾಂಗ್ರೆಸ್ ಮುಖಂಡರಾದ ವೈ.ಹೆಚ್. ನಾಗರಾಜ್, ಡಾ.ಶ್ರೀನಿವಾಸ್ ಕರಿಯಣ್ಣ ದಾವಣಗೆರೆಯತ್ತ ತೆರಳಿರುವ ಕೆ.ಎಸ್.ಆರ್.ಟಿ.ಸಿ. ಬಸ್ಗಳಿಗೆ ವಿಶೇಷ ಪೂಜೆ ಸಲ್ಲಿಸಿ ಪ್ರಯಾಣ ಸುಖಕರವಾಗಲಿ ಎಂದು ಬೇಡಿಕೊಂಡರು.
ಅದರಂತೆ ವಿವಿಧ ಬಡಾವಣೆಗಳಿಂದ ಅಭಿಮಾನಿಗಳು, ಕಾರ್ಯಕರ್ತರು, ಮಹಿಳಾ ಕಾರ್ಯಕರ್ತರು ತಮಗಾಗಿ ನಿಗದಿಯಾಗಿದ್ದ ಬಸ್ಗಳಲ್ಲಿ ತೆರಳಿದರು. ಖಾಸಗಿ ವಾಹನಗಳಲ್ಲಿ ಕೂಡ ಸಾಕಷ್ಟು ಜನರು ಹೊರಟಿದ್ದು, ಕಂಡುಬಂದಿತು.